Posts Tagged ‘Mangalore’

ಮಂಗಳೂರಿನಲ್ಲಿ ಹಿಂದುತ್ವದ ಹೆಸರಲ್ಲಿ ದಾಂಧಲೆ

January 28, 2009

ಮಂಗಳೂರಿನ ಕೇಂದ್ರಸ್ಥಳದಲ್ಲಿರುವ ಪಬ್ ಒಂದರಲ್ಲಿ ಕಳೆದ ಶನಿವಾರದಂದು ಹಾಡುಹಗಲೇ ಹುಡುಗಿಯರ ಮೇಲೆ ಕೈಯಾಡಿಸಿ, ಸಾರ್ವಜನಿಕವಾಗಿ ಮಾನಹಾನಿಗೈದು ಹಲ್ಲೆ ನಡೆಸಿದ್ದಲ್ಲದೆ, ತಮ್ಮ ಬರ್ಬರ ದುಷ್ಕೃತ್ಯಗಳನ್ನು ಸಮರ್ಥಿಸಿಕೊಳ್ಳಲು ಹಿಂದೂ ಧರ್ಮ ಹಾಗೂ ಸಂಸ್ಕೃತಿ, ಶ್ರೀ ರಾಮಚಂದ್ರ ಹಾಗೂ ಭಾರತ ಮಾತೆಯ ಹೆಸರುಗಳನ್ನು ದುರ್ಬಳಕೆ ಮಾಡಿಕೊಂಡಿರುವ ಹಿಂದುತ್ವವಾದಿ ಉಗ್ರಗಾಮಿಗಳ ಕುಕೃತ್ಯಗಳು ಹೇಯವೂ, ಖಂಡನೀಯವೂ ಆಗಿವೆ. ಈ ಕೃತ್ಯಗಳನ್ನು ನಡೆಸಿದವರಿಗೂ, ಅವರಿಗೆ ಬೆಂಗಾವಲಾಗಿರುವ ಹಿಂದುತ್ವವಾದಿ ಶಕ್ತಿಗಳಿಗೂ ಭಾರತದ ಭವ್ಯ ಸಂಸ್ಕೃತಿಯ ಬಗೆಗಾಗಲೀ, ಹಿಂದೂ ಧರ್ಮದ ಬಗೆಗಾಗಲೀ ಯಾವುದೇ ತಿಳುವಳಿಕೆಯಿಲ್ಲವೆನ್ನುವುದು ಇದರಿಂದ ಮತ್ತೊಮ್ಮೆ ಸಾಬೀತಾಗಿದೆ. ಇಂತಹಾ ಅಮಾನವೀಯವಾದ, ನಾಚಿಕೆಗೇಡಿನ ಮೃಗೀಯ ವರ್ತನೆಯು ನಾಗರಿಕ ಸಮಾಜದ ಜೀವನಕ್ರಮಕ್ಕೆ ತೀರಾ ವ್ಯತಿರಿಕ್ತವಾಗಿದ್ದು, ಇಪ್ಪತ್ತೊಂದನೇ ಶತಮಾನದ ಪ್ರಗತಿಪಥದಲ್ಲಿರುವ ನಮ್ಮನ್ನು ಶಿಲಾಯುಗದತ್ತ ಹಿಂದೊಯ್ಯುವ ಪ್ರತಿಗಾಮೀ ಕೃತ್ಯಗಳೆಂದೇ ಹೇಳಬೇಕಾಗಿದೆ.

ಹಿಂದೂ ಧರ್ಮದ ಹೆಸರನ್ನು ದುರ್ಬಳಕೆ ಮಾಡಿಕೊಂಡು ತಮ್ಮ ಫ್ಯಾಸಿಸ್ಟ್ ಕಾರ್ಯಸೂಚಿಯನ್ನು ಈ ದೇಶದ ಮೇಲೆ ಹೇರಲು ಯತ್ನಿಸುತ್ತಿರುವ ಹಿಂದುತ್ವವಾದಿಗಳ ಹತ್ತು ಹಲವು ತುಂಡು ಸಂಘಟನೆಗಳನ್ನು ರಾಜ್ಯದಲ್ಲಿ ಆಡಳಿತಾರಾಢವಾಗಿರುವ ಬಿಜೆಪಿಯು ಪ್ರತ್ಯಕ್ಷವಾಗಿಯೂ, ಪರೋಕ್ಷವಾಗಿಯೂ ಬೆಂಬಲಿಸುತ್ತಿರುವುದು ಖಂಡನೀಯವಾಗಿದ್ದು, ಅಸಾಂವಿಧಾನಿಕವೂ ಆಗಿದೆ. ಯಾವುದೇ ನ್ಯಾಯಬಾಹಿರ ಚಟುವಟಿಕೆಗಳಾಗುತ್ತಿದ್ದಲ್ಲಿ ಅದನ್ನು ನಿಯಂತ್ರಿಸಲು ಇದೇ ಸರಕಾರದ ಪೋಲೀಸರಿಗೆ ಸಾಧ್ಯವಿಲ್ಲವೆಂದಾದರೆ, ಆ ವ್ಯವಸ್ಥೆಯ ಮುಖ್ಯಸ್ಥರಾಗಿರುವ ಗೃಹ ಸಚಿವರು ಈ ಕೂಡಲೇ ತಮ್ಮ ಅದಕ್ಷತೆಯನ್ನೂ, ಅಸಾಮರ್ಥ್ಯವನ್ನೂ ಒಪ್ಪಿಕೊಂಡು ರಾಜೀನಾಮೆ ನೀಡುವುದೊಳ್ಳೆಯದು.

ಪಾಕಿಸ್ತಾನದ ಆಡಳಿತವು ಸಾಕಿ ಬೆಳೆಸಿದ ಮತೀಯ ದಂಗೆಕೋರರು ಇಂದು ಪಾಕಿಸ್ತಾನವನ್ನು ಮಾತ್ರವಲ್ಲ ಇಡೀ ಜಗತ್ತನ್ನೇ ನುಂಗಲು ಹವಣಿಸುತ್ತಿರುವ, ಯಾರ ನಿಯಂತ್ರಣಕ್ಕೂ ಸಿಕ್ಕದಿರುವ ಅತಿದುಷ್ಟ ಶಕ್ತಿಗಳಾಗಿ ಬೆಳೆದಿರುವ ನಿದರ್ಶನವು ನಮ್ಮ ಮುಂದಿರುವಾಗ, ಸಮಾಜಘಾತುಕರನ್ನೂ, ಹಿಂಸಾಚಾರಿಗಳನ್ನೂ ಹಿಂದುತ್ವದ ಹೆಸರಲ್ಲಿ ದಾಳಿ ಮಾಡಲು ಸಿದ್ಧಗೊಳಿಸಿ ನಾಗರಿಕ ಸಮಾಜದ ಮೇಲೆ ಸವಾರಿ ಮಾಡಲು ಪ್ರೋತ್ಸಾಹಿಸುತ್ತಿರುವ ಮತ್ತು ಅಂತಹವರ ಮೇಲೆ ನಿಷ್ಠುರವಾದ ಕಾನೂನು ಕ್ರಮ ಕೈಗೊಳ್ಳಲು ಹಿಂಜರಿಯುತ್ತಿರುವ ಬಿಜೆಪಿಯ ನಿಜಬಣ್ಣವನ್ನು ನಮ್ಮ ಜನರು, ಅದರಲ್ಲೂ ಮುಖ್ಯವಾಗಿ ಯುವಜನರು ಅರ್ಥ ಮಾಡಿಕೊಳ್ಳುವುದರಲ್ಲಿ ಈ ದೇಶದ ಹಿತವು ಅಡಗಿದೆ. ಬಿಜೆಪಿ ಮತ್ತಿತರ ಹಿಂದುತ್ವವಾದಿ ಶಕ್ತಿಗಳು ಹೇರಲೆತ್ನಿಸುತ್ತಿರುವ ಧರ್ಮವಾಗಲೀ, ಸಂಸ್ಕೃತಿಯಾಗಲೀ ನಮ್ಮ ಪ್ರಜಾಸತ್ತಾತ್ಮಕ ನಾಗರಿಕ ಸಮಾಜಕ್ಕೆ ಅಗತ್ಯವಿಲ್ಲದಿದ್ದು, ಯಾವುದೇ ಧರ್ಮಗಳ ಹಂಗಿಲ್ಲದ ಶಾಂತಿಯುತ ಸಮಾಜವನ್ನು ಕಟ್ಟುವಲ್ಲಿ ನಮ್ಮ ಯುವಜನತೆ ಒಗ್ಗೂಡಿ ಶ್ರಮಿಸಬೇಕಾಗಿದೆ.

ಮಂಗಳೂರಿನ ದಾಳಿಕೋರರ ಮೇಲೆ ಭಯೋತ್ಪಾದನಾ ನಿಗ್ರಹ ಕ್ರಮ ಕೈಗೊಳ್ಳಿ:  Apply anti-terror laws against Mangalore attackers: UR Ananthamurthy

ಮಂಗಳೂರಿನ ದಾಳಿಕೋರರಿಗೂ ಎಬಿವಿಪಿ, ಬಿಜೆಪಿ, ಆರೆಸ್ಸೆಸ್, ಮಾಲೆಗಾಂವ್ ನಡುವಿನ ಸಂಬಂಧಗಳು

Advertisements

ಬಾಂಬು ದಾಳಿಯೂ, ಕೋಮು ದೊಂಬಿಯೂ ಒಂದೇ ಎಂದು ಒಪ್ಪಿಕೊಂಡ ಯೆಡಿಯೂರಪ್ಪ!

September 23, 2008


ದಿಲ್ಲಿ ಬಾಂಬ್ ಸ್ಫೋಟ | ಚರ್ಚ್ ದಾಳಿ | ಬಾಬರಿ ಮಸೀದಿ ದಾಳಿ

ಧರ್ಮದ ಹೆಸರಿನಲ್ಲಿ ವಿವಿಧ ಗುಂಪುಗಳಿಂದ, ವಿವಿಧ ರೂಪಗಳಲ್ಲಿ ಭಯೋತ್ಪಾದನೆಯ ಪ್ರಕರಣಗಳು ಎಲ್ಲೆಡೆಯಲ್ಲೂ ಹೆಚ್ಚುತ್ತಿವೆಯಲ್ಲದೆ, ಯಾವುದೇ ತಪ್ಪುಗಳನ್ನೆಸಗದ ಅಮಾಯಕ ಜನರೇ ಅವುಗಳ ಬಲಿಪಶುಗಳಾಗಿರುತ್ತಾರೆ. ಖ್ಯಾತ ನಿರ್ದೇಶಕರಾದ ಮಹೇಶ್ ಭಟ್ ಹೇಳಿದಂತೆ, ಧರ್ಮದ ಹೆಸರಿನ ಬಾಂಬಿಗೂ ದೊಂಬಿಗೂ ಯಾವುದೇ ವ್ಯತ್ಯಾಸಗಳೂ ಇಲ್ಲ. ಇತ್ತೀಚೆಗೆ ದಿಲ್ಲಿಯಲ್ಲಿ ಸ್ಫೋಟಿಸಿದ ಬಾಂಬುಗಳಾಗಿರಲಿ, ಬಾಬ್ರಿ ಮಸೀದಿಯ ನಾಶವಿರಲಿ ಅಥವಾ ಚರ್ಚುಗಳ ಮೇಲಿನ ದಾಳಿಯಿರಲಿ – ಇವೆಲ್ಲಾ ಒಂದೇ ಕಾಹಿಲೆಯ ವಿವಿಧ ಲಕ್ಷಣಗಳಷ್ಟೇ. ವಿಶೇಷವೆಂದರೆ ಕರ್ನಾಟಕದ ಮುಖ್ಯಮಂತ್ರಿಗಳೂ ಇದನ್ನು ಒಪ್ಪಿಕೊಂಡಂತಿದೆ!

ಆದರೆ ಈ ಜ್ಞಾನೋದಯವೇನೂ ಘಟನೆಗಳು ನಡೆದೊಡನೆ ಆದದ್ದಲ್ಲ. ಒಂದು ವಾರ ಗಲಭೆಕೋರರ ಪರ ವಕಾಲತ್ತು ವಹಿಸಿದ ಬಳಿಕ ಪರೋಕ್ಷವಾಗಿಯಷ್ಟೇ ಈ ತಿಳುವಳಿಕೆಯು ವ್ಯಕ್ತಗೊಂಡಿತು.

ದಿಲ್ಲಿಯಲ್ಲಿ ಸರಣಿ ಬಾಂಬ್ ದಾಳಿಗಳಾದ ಮರುದಿನವೇ ದಕ್ಷಿಣ ಕನ್ನಡದ ವಿವಿಧ ಭಾಗಗಳಲ್ಲಿ ಚರ್ಚುಗಳ ಮೇಲೆ ಸುಯೋಜಿತವಾದ ಸರಣಿ ದಾಳಿಗಳು ನಡೆದವು. ಬಲಾತ್ಕಾರದಿಂದ ಮತಾಂತರ ಮಾಡುವುದನ್ನು ವಿರೋಧಿಸಿ ತಾವು ಈ ದಾಳಿಗಳನ್ನು ನಡೆಸಿದೆವೆಂದು ಆಳುವ ಪಕ್ಷದ ಅಂಗಗಳಾದ ಬಜರಂಗ ದಳ ಹಾಗೂ ವಿ.ಹಿಂ.ಪ. ಗಳು ಘೋಷಿಸಿದವು. ಆದರೆ ಸಂಪರ್ಕದ ಕೊರತೆಯಿಂದಲೋ ಏನೋ, ಮತಾಂತರಕ್ಕೆ ಪ್ರತೀಕಾರವಾಗಿ ಈ ದಾಳಿಗಳನ್ನು ನಡೆಸಲಾಯಿತೆಂದೂ, ಸರಕಾರವನ್ನು ಅಸ್ಥಿರಗೊಳಿಸಲು ವಿರೋಧ ಪಕ್ಷಗಳು ನಡೆಸಿರುವ ಪಿತೂರಿ ಇದೆಂದೂ ಮುಖ್ಯಮಂತ್ರಿಗಳು ವಿರೋಧಾಭಾಸದ ಹೇಳಿಕೆ ಹೊರಡಿಸಿದರು. ಯಾವುದೇ ರಾಗ ದ್ವೇಷಗಳಿಲ್ಲದೆ ಜನರ ಪ್ರಾಣಗಳನ್ನೂ, ಆಸ್ತಿಗಳನ್ನೂ ರಕ್ಷಿಸುವ ಪಣತೊಟ್ಟು ಅಧಿಕ್ಕಾರಕ್ಕೇರಿದ ಗೃಹ ಮಂತ್ರಿಗಳು ದಾಳಿಕೋರರನ್ನು ಬಂಧಿಸುವ ಗೋಜಿಗೆ ಹೋಗದೆ ಮತಾಂತರವನ್ನು ಖಂಡಿಸುವ ಹೇಳಿಕೆ ಹೊರಡಿಸಿದರು. ಜಿಲ್ಲಾ ಉಸ್ತುವಾರಿ ಸಚಿವರು ಬಜರಂಗ ದಳದವರ ಹೇಳಿಕೆಯು ತಮ್ಮ ಅರಿವಿಗೇ ಬಂದಿಲ್ಲವೆಂದು ಜಾರಿಕೊಂಡರು.

ದಾಳಿ ನಡೆಸಿದ್ದು ತಾನೇ ಎಂದೂ, ಮತಾಂತರವು ಮುಂದುವರಿದರೆ ದಾಳಿಗಳೂ ಮುಂದುವರಿಯಲಿವೆಯೆಂದೂ ಬಜರಂಗ ದಳವು ಒಂದೆಡೆ ಬೀಗುತ್ತಿದ್ದರೆ, ಇನ್ನೊಂದೆಡೆ ಗೃಹ ಮಂತ್ರಿಗಳು ತಮ್ಮ ಪರಿವಾರದಿಂದ ತುಂಡಾಗಿ ಹೋದ ಶ್ರೀ ರಾಮ ಸೇನೆಯ ಮೇಲೆ ಗೂಬೆ ಕೂರಿಸಿ ತಮ್ಮ ಮುಯ್ಯಿ ತೀರಿಸಿಕೊಳ್ಳಲು ಯತ್ನಿಸಿದರು, ಬಜರಂಗ ದಳವನ್ನು ರಕ್ಷಿಸುವ ಕೆಲಸವನ್ನು ಮುಂದುವರೆಸಿದರು. ಒಂದಿಲ್ಲೊಂದು ಹಿಂದೂ ಕೋಮುವಾದಿಗಳೇ ದಾಳಿ ನಡೆಸಿದ್ದೆಂದು ಹೇಳಿಕೊಂಡ ಗೃಹಮಂತ್ರಿಗಳು ಈ ದಾಳಿಗಳ ಹಿಂದೆ ವಿರೋಧ ಪಕ್ಷದವರ ಕೈವಾಡವಿದೆಯೆಂದೂ ಹೇಳಲು ಮರೆಯಲಿಲ್ಲ! ಒಂದು ತಪ್ಪಾನ್ನು ಅಡಗಿಸಲು, ಒಂದು ಸುಳ್ಳನ್ನು ಮರಮಾಚಲು ಸಾವಿರ ಸುಳ್ಲುಗಳನ್ನು ಹೇಳಬೇಕಾಗುತ್ತದೆಯೆನ್ನುವುದಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಬೇರೆ ಬೇಕೆ? ಆದರೆ ದಾಳಿಗಳು ಮುಂದುವರಿದಾಗ ಕೇಂದ್ರ ಸರಕಾರವು ಸಂವಿಧಾನದ 355ನೇ ವಿಧಿಯನುಸಾರ ರಾಜ್ಯ ಸರಕಾರಕ್ಕೆ ಎಚ್ಚರಿಕೆ ನೀಡಿದೊಡನೆ ಬಜರಂಗ ದಳದ ಮುಖ್ಯಸ್ಥನನ್ನು ಬಂಧಿಸಲೇ ಬೇಕಾಯಿತು. ಆತ ಅಪರಾಧಿಯಲ್ಲದಿದ್ದರೆ ಬಂಧಿಸುವ ಪ್ರಮೇಯವೇನಿತ್ತು? (ಆದರೆ, ಎರಡೇ ದಿನಗಳಲ್ಲಿ ಆತನಿಗೆ ಜಾಮೀನು ದೊರೆತಿದ್ದನ್ನು ನೋಡಿದರೆ, ಸರಕಾರದ ಬದ್ಧತೆಯು ಎಷ್ಟೆನ್ನುವುದು ಗೊತ್ತಾಗುತ್ತದೆ.) ಎಲ್ಲಾ ವಲಯಗಳಿಂದಲೂ ಒತ್ತಡ ಹೆಚ್ಚಿದಾಗ ನ್ಯಾಯಾಂಗ ತನಿಖೆಗೂ ಸರಕಾರವು ಕ್ರಮ ಕೈಗೊಳ್ಳಬೇಕಾಯಿತು.

ಇಷ್ಟೆಲ್ಲಾ ಫಜೀತಿಯಾದಾಗಲೂ ಮುಖವುಳಿಸಿಕೊಳ್ಳಬೇಡವೇ? ಈ ಎಲ್ಲ ಬೆಳವಣಿಗೆಗಳಿಂದ ಸಂಕಷ್ಟಕ್ಕೆ ಸಿಲುಕಿ ಆಘಾತಗೊಂಡ ಮುಖ್ಯಮಂತ್ರಿಗಳು ಕೇಂದ್ರ ಸರಕಾರವು ಇಬ್ಬಗೆ ನೀತಿಯನ್ನು ಅನುಸರಿಸುತ್ತಿದೆಯೆಂದು ದೂರಿ, ‘ಗಲಭೆ ಪೀಡಿತವಾದ’ ದಿಲ್ಲಿಯ ಸರಕಾರದ ಮೇಲೂ ಇಂತಹದೇ ಕ್ರಮವನ್ನೇಕೆ ಕೈಗೊಳ್ಳಲಿಲ್ಲವೆಂದು ಪ್ರಶ್ನಿಸಿದರು. ತಮ್ಮ ವೈಫಲ್ಯವನ್ನು ಮುಚ್ಚುವುದಕ್ಕೆ ಕೇಂದ್ರ ಸರಕಾರವನ್ನು ತೆಗಳುವ ತರಾತುರಿಯಲ್ಲಿ ದಿಲ್ಲಿಯ ಬಾಂಬು ಸ್ಫೋಟಗಳನ್ನೂ, ಮಂಗಳೂರಿನಲ್ಲಿ ನಡೆದ ಚರ್ಚುಗಳ ಮೇಲಿನ ದಾಳಿಯನ್ನೂ ಮುಖ್ಯಮಂತ್ರಿಗಳೇ ಸಮೀಕರಿಸಿಬಿಟ್ಟರು! ಆದರೆ ಅದೇ ಉಸಿರಿನಲ್ಲಿ ದಿಲ್ಲಿ ಸ್ಫೋಟಗಳನ್ನು ಖಂಡಿಸಿ, ಚರ್ಚುಗಳ ಮೇಲಿನ ದಾಳಿಯನ್ನು ಪರೋಕ್ಷವಾಗಿ ಬೆಂಬಲಿಸಿದರು! ಬಹುಸಂಖ್ಯಾಕರ ಹೆಸರನ್ನು ಉಪಯೋಗಿಸಿಕೊಳ್ಳುವ ಸಮಾಜ ವಿರೋಧಿ ಶಕ್ತಿಗಳಿಗೆ ದಾಂಧಲೆ ಮಾಡುವುದಕ್ಕೆ ಸಂಪೂರ್ಣ ಸ್ವಾತಂತ್ರ್ಯವಿರುವುದಷ್ಟೇ ಅಲ್ಲ, ಸರಕಾರದ ಬೆಂಬಲವೂ ಅವರಿಗಿದೆ!

ಇನ್ನು ಮಾನ್ಯ ಗೃಹ ಮಂತ್ರಿಗಳ ‘ಹೋರಾಟದ ಕೆಚ್ಚನ್ನು’ ನೋಡಬೇಕಾದರೆ ಅವರದ್ದೇ ಆದ ಬ್ಲಾಗನ್ನು ನೋಡಬೇಕು! ಅವರ ‘ನಿಷ್ಪಕ್ಷಪಾತತನದ’ ರುಚಿಯೂ ಅಲ್ಲಿದೆ.

  • ಮತಾಂತರ, ಚರ್ಚುಗಳಲ್ಲಿ ಕ್ರಿಶ್ಚಿಯನರು ನಡೆಸಿದರೆನ್ನಲಾದ ದೊಂಬಿ, ಕಲ್ಲೆಸತ ಹಾಗೂ ಪೋಲೀಸರ ಮೇಲಿನ ದಾಳಿಗಳ ಬಗ್ಗೆ ವಿಸ್ತಾರವಾಗಿ ಬರೆದು, ಅದಕ್ಕೆ ಪೂರಕವಾಗಿ ಹಲವಾರು ಛಾಯಚಿತ್ರಗಳನ್ನೂ ಒದಗಿಸಿರುವ ಮಹನೀಯರು, ಪ್ರಾರ್ಥನಾಮಂದಿರಗಳ ಮೇಲಾಗಿರುವ ದಾಳಿಗಳ ಬಗ್ಗೆ ಒಂದೇ ಒಂದು ಶಬ್ದವನ್ನೂ ಬರೆದಿಲ್ಲ!
  • ತಾನು ಘಟನಾ ಸ್ಥಳಗಳಿಗೆ ಭೇಟಿ ನೀಡಿದ ಬಳಿಕ ತುರ್ತು ಕ್ರಮಗಳನ್ನು ಕೈಗೊಳ್ಳಲಾಯಿತು ಎಂದು ಗೃಹ ಮಂತ್ರಿಗಳ ಅಂಬೋಣ. ವ್ಹಾ! ಎಲ್ಲಿಯೇ ಗಲಭೆ, ದೊಂಬಿಗಳಾಗಲಿ, ನೀವಲ್ಲಿಗೆ ತಲುಪಿದ ಮೇಲಷ್ಟೇ ಅದರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವುದಾಗಿದ್ದರೆ ರಾಜ್ಯದ ಜನತೆಯ ಆಸ್ತಿಪಾಸ್ತಿಗಳ ರಕ್ಷಣೆಯಾದಂತೆಯೇ! ಉಡುಪಿಗೆ ಸದ್ಯದಲ್ಲಿಯೇ ಒಂದು ವಿಮಾನ ನಿಲ್ದಾಣವೂ ಬರಬಹುದೇನೋ!!
  • ಖರ್ಗೆ ಗೃಹ ಮಂತ್ರಿಯಾಗಿದ್ದಾಗ ಮಂಗಳೂರಿನಲ್ಲಿ ನಡೆದ ಕೋಮು ಗಲಭೆ ನಿಯಂತ್ರಣಕ್ಕೆ ಬರಲು 16 ದಿನಗಳೇ ಬೇಕಾದವು, ತಾನು ಈ ಬಾರಿ ಎರಡೇ ದಿನಗಳಲ್ಲಿ ಅದನ್ನು ನಿಯಂತ್ರಿಸಿದ್ದೇನೆ ಎಂದವರು ಹೇಳಿಕೊಂಡಿದ್ದಾರೆ. ಒಕ್ಟೋಬರ್ 2006ರಲ್ಲಿ ದನಗಳ ಸಾಗಾಟದ ಹೆಸರಲ್ಲಿ ಹಿಂದುತ್ವ ಪಡೆಯೇ ಆರಂಭಿಸಿದ ಕೋಮುಗಲಭೆಯಿಂದ ಒಂದು ವಾರ ಮಂಗಳೂರಿನಲ್ಲಿ ಕರ್ಫ್ಯು ಹೇರಿದ್ದಾಗ ಭಾಜಪ-ಜನತಾ ದಳ ಸರಕಾರವೇ ಅಧಿಕಾರದಲ್ಲಿತ್ತೆನ್ನುವುದು ಮಾನ್ಯ ಗೃಹ ಮಂತ್ರಿಗಳಿಗೆ ಮರೆತೇ ಹೋದಂತಿದೆ. ಅಲ್ಲದೆ, ತಾನು ವಿರೋಧ ಪಕ್ಷದಲ್ಲಿದ್ದಾಗ ತನ್ನ ಅಂಗ ಸಂಸ್ಥೆಗಳು ಭಾಗಿಯಾಗುವ ಗಲಭೆಗಳು 16 ದಿನ, ತಾನೇ ಆಳುವಾಗ ಎರಡೇ ದಿನ ಎಂದು ಅವರು ಹೇಳಿಕೊಂಡರೆ, ಅದರ ಗೂಢಾರ್ಥವೂ, ಗಲಭೆಗಳ ಹಿಂದಿನ ಕಾಣದ ಕೈಗಳೂ ವ್ಯಕ್ತವಾಗುವುದಿಲ್ಲವೆ?
  • ತಾನು ಈ ಪರೀಕ್ಷೆಯಲ್ಲಿ ಮೊದಲ ಶ್ರೇಣಿಯಲ್ಲಿ ಉತ್ತೀರ್ಣನಾಗಿದ್ದೇನೆ ಎಂದವರು ಹೇಳಿಕೊಂಡಿದ್ದಾರೆ. ಪರೀಕ್ಷೆಯ ಫಲಿತಾಂಶವನ್ನು ಪರೀಕ್ಷಕರು ಹೇಳುವುದೇ ಹೊರತು ವಿದ್ಯಾರ್ಥಿಯಲ್ಲ ಎನ್ನುವ ಸರಳ ಸತ್ಯವೂ ಮಾನ್ಯ ಗೃಹ ಮಂತ್ರಿಗಳಿಗೆ ತಿಳಿಯದೆಂದರೆ ಹೇಗೆ? ಭಾಜಪದ ಲೋಕಸಭಾ ಸದಸ್ಯರಾದ ಸಾಂಗ್ಲಿಯಾನರೇ ಗೃಹ ಸಚಿವರ ವಿರುದ್ಧ ತೀವ್ರವಾದ ಟೀಕೆಯನ್ನು ಮಾಡಿದ್ದಾರಲ್ಲಾ? ಆದರೆ ಅದಕ್ಕಾಗಿ ಅವರ ಮೇಲೆಯೇ ಕ್ರಮ ಕೈಗೊಳ್ಳಬೇಕಂತೆ! ಟೀಕೆಗಳನ್ನು ಸಹಿಸದಿರುವುದು ಫ್ಯಾಸಿಸಂನ ಲಕ್ಷಣವಲ್ಲವೆ?
  • ಬಜರಂಗ ದಳದ ವಿರುದ್ಧ ದೂರು ನೀಡುವವರಿಗೆ ಕಾನೂನಿನ ಜ್ಞಾನವಿರಬೇಕಂತೆ. ಆದರೆ, ಹಿಂದುತ್ವವಾದಿಗಳು ಯಾರ ಬಗೆಗೂ ತಮಗನಿಸಿದ ತೀರ್ಪನ್ನು ಹೊರಡಿಸಬಹುದು! ಹಾಗಾದರೆ ನ್ಯಾಯಾಂಗ ತನಿಖೆಯ ಅಗತ್ಯವಾದರೂ ಏನು?

ಸೆಪ್ಟೆಂಬರ್ 24ರಂದು ಮಾನ್ಯ ಮುಖ್ಯಮಂತ್ರಿಯವರು ಕೊನೆಗೂ ತಮ್ಮ ಸರಕಾರಕ್ಕಾಗಿರುವ ನಾಚಿಕೆಯನ್ನು ಒಪ್ಪಿಕೊಳ್ಳಲೇ ಬೇಕಾಯಿತು: Government must ‘hang its head in shame’: Yeddyurappa

ಆದರೆ ಇನ್ನೂ ಬೀದಿ ಜಗಳದ ಮನಸ್ಥಿತಿಯ ಬ್ಲಾಗನ್ನು ಬರೆಯುತ್ತಿರುವ ಮಾನ್ಯ ಗೃಹ ಸಚಿವರಿಗೆ ಯಾವಾಗ ಅರಿವು ಮೂಡುತ್ತದೋ ಕಾದು ನೋಡೋಣ!

ಬೆಂಗಳೂರಿನ ಆರ್ಚ್ ಬಿಷಪರು ಮುಖ್ಯಮಂತ್ರಿಗೆ ಹೇಳಿದ್ದೇನು?

ವಿಡಿಯೋ ನೋಡಿ:
Situation grim in Mangalore

Situation grim in Mangalore


Karnataka CM visits violence-hit Mangalore

Karnataka CM visits violence-hit Mangalore


Karnataka churches vandalised

Karnataka churches vandalised

ishare video