ಸಂಘ ಪರಿವಾರದ ಹಿಂಸೆಗೆ ಸುಳ್ಳಿನ ಸಮರ್ಥನೆ

�ೈರಪ್ಪ

ಭೈರಪ್ಪ

ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಎಸ್ಸೆಲ್ ಭೈರಪ್ಪನವರ ಬಹು ಚರ್ಚಿತ ಲೇಖನವನ್ನು ಓದಿದಾಗ, ಹಿಂಸಾಚಾರವನ್ನು ಹೇಗಾದರೂ ಸಮರ್ಥಿಸಿಕೊಳ್ಳಬೇಕಾದಂತಹ ಕಾಲಘಟ್ಟದಲ್ಲಿ ನಾವೀಗ ಇದ್ದೇವೆಯೇ ಎನ್ನುವ ಪ್ರಶ್ನೆ ಏಳುತ್ತದೆ. ಹೌದು ಎನ್ನುವುದಾದರೆ ರಾಜ್ಯದ ಪ್ರಮುಖ ದೈನಿಕವೊಂದರಲ್ಲಿ ಮುಖ್ಯ ಸುದ್ದಿಗಳೆಲ್ಲವನ್ನೂ ಬದಿಗಿರಿಸಿ ಪ್ರಕಟಿಸಲಾದ ಒಂದೂವರೆ ಪುಟಗಳಷ್ಟು ದೀರ್ಘವಾದ ಭೈರಪ್ಪನವರ ಲೇಖನವಾಗಲೀ, ನಂತರ ಪ್ರಕಟಗೊಂಡ ಮಹೇಂದ್ರ ಕುಮಾರ್, ರಾಮಚಂದ್ರ ಶೆಣೈ ಮುಂತಾದವರ ಪ್ರತಿಕ್ರಿಯೆಗಳಾಗಲೀ ಯಾವುದೇ ಅಚ್ಚರಿಯನ್ನು ಹುಟ್ಟಿಸಬೇಕಾದದ್ದಿಲ್ಲ. ಆದರೆ, ದಾಳಿ, ದೊಂಬಿ, ಕಲ್ಲೆಸತ, ಇರಿತ, ಅತ್ಯಾಚಾರ, ಹೆಂಗಸರು-ಮಕ್ಕಳೆನ್ನದೆ ಸಿಕ್ಕಸಿಕ್ಕವರನ್ನು ಜೀವಂತವಾಗಿ ಸುಡುವುದು ಇವೇ ಮುಂತಾದ ಕೃತ್ಯಗಳೆಲ್ಲ ಯಾವುದೇ ಕಾರಣಕ್ಕಾಗಿ ಸಮರ್ಥನೀಯವಾಗಬಹುದು ಎನ್ನುವ ವಾದವೇ ತೀರಾ ಅಮಾನವೀಯವೂ, ಅನಾಗರಿಕವೂ, ಹೇಯವೂ, ತಿರಸ್ಕಾರಯೋಗ್ಯವೂ ಆಗಿದೆ ಎನ್ನುವವರಿಗಷ್ಟೇ ಇದರಿಂದ ಆತಂಕವೂ, ಬೇಸರವೂ, ಹೇಸಿಗೆಯೂ ಅನಿಸುತ್ತದೆ.

ಮೊದಲು ಅಮಾನವೀಯವಾದ ಹಿಂಸೆಗೆಳಸುವುದು, ಅದು ಸುದ್ದಿಯಾಗುತ್ತಿದ್ದಂತೆ ಅದಕ್ಕೊಂದು ಕಾರಣವನ್ನು ನೀಡಿ ಆ ಬಗ್ಗೆ ಚರ್ಚೆಯನ್ನು ಒತ್ತಾಯಿಸುವುದು, ಹಿಂಸೆಯ ಬಗ್ಗೆ ಯಾರೂ ಸೊಲ್ಲೆತ್ತದಂತೆ ಎಲ್ಲರ ಗಮನವನ್ನೂ ಇಂತಹಾ ವ್ಯರ್ಥ ಚರ್ಚೆಗಳತ್ತಲೇ ಸೆಳೆಯುವುದು, ಹಿಂಸಾಚಾರವನ್ನು ಖಂಡಿಸಿ ಚರ್ಚೆಗೆ ಸೊಪ್ಪು ಹಾಕದವರನ್ನು ವಾಚಾಮಗೋಚರ್ವಾಗಿ ನಿಂದಿಸುವುದು – ಇವು ಸಂಘ ಪರಿವಾರದ ತಂತ್ರಗಾರಿಕೆಯ ಸ್ಥೂಲರೂಪ. ಇದನ್ನು ಕಾರ್ಯಗತಗೊಳಿಸುವಲ್ಲಿ ಭೈರಪ್ಪನವರಂತಹಾ ‘ಗೌರವಾನ್ವಿತರ’ ನೆರವು ಸಂಘ ಪರಿವಾರಕ್ಕೆ ವರದಾನವಾಗುತ್ತದೆಯೆನ್ನುವುದನ್ನು ಬೇರೆ ಹೇಳಬೇಕಾಗಿಲ್ಲ.

ಮಂಗಳೂರಿನಲ್ಲಿ ಚರ್ಚುಗಳ ಮೇಲೆ ದಾಳಿ

ಮಂಗಳೂರಿನಲ್ಲಿ ಚರ್ಚುಗಳ ಮೇಲೆ ದಾಳಿ

ಒಂದಂತೂ ದಿಟ. ಯಾವುದೇ ರೂಪದ ಹಿಂಸಾಚಾರದಲ್ಲಿ ತೊಡಗುವವರು, ಅದನ್ನು ಸಮರ್ಥಿಸುವವರು ಹಾಗೂ ಪರೋಕ್ಷವಾಗಿ ಯಾ ಪ್ರತ್ಯಕ್ಷವಾಗಿ ಅದನ್ನು ಬೆಂಬಲಿಸುವವರೆಲ್ಲರೂ ಬೇರಾವುದೇ ರೀತಿಯ ಹಿಂಸಾಚಾರವನ್ನು (ಅದು ಭಯೋತ್ಪಾದನೆಯಾಗಿರಬಹುದು ಅಥವಾ ಹಿಂಸೆಗೆ ಪ್ರತಿಕ್ರಿಯೆಯೇ ಆಗಿರಬಹುದು) ಖಂಡಿಸುವ ನೈತಿಕ ಹಕ್ಕನ್ನು ತನ್ನಿಂತಾನಾಗಿ ಕಳೆದುಕೊಳ್ಳುತ್ತಾರೆ. ತಾವು ಯಾರ ಮೇಲಾದರೂ ಯಾವುದೇ ರೀತಿಯ ಹಿಂಸೆಯನ್ನಾದರೂ ಮಾಡಬಹುದು, ಅದಕ್ಕೆ ತಮ್ಮದೇ ಆದ ಕಾರಣಗಳನ್ನೂ ಕೊಟ್ಟುಕೊಳ್ಳಬಹುದು, ಆದರೆ ಇತರರು ಯಾರೂ ಹಿಂಸೆಯನ್ನು ಮಾಡಬಾರದು ಮಾತ್ರವಲ್ಲ, ತಾವು ನಡೆಸಿದ ಹಿಂಸಾಚಾರವನ್ನು ಪ್ರಶ್ನಿಸಲೂ ಬಾರದು ಎನ್ನುವ ಫ್ಯಾಸಿಸ್ಟ್ ಸರ್ವಾಧಿಕಾರಿ ಅಹಂಕಾರದ ವಾದಗಳನ್ನು ಎಲ್ಲರೂ ಒಪ್ಪಬೇಕೆನ್ನುವ ಅಗತ್ಯವಿಲ್ಲ ಎನ್ನುವ ಸರಳ ಸತ್ಯವೂ ಭೈರಪ್ಪನವರಂತಹಾ ‘ಮುತ್ಸದ್ಧಿಗಳಿಗೆ’ ತಿಳಿಯದಾಯಿತೆ? ಲೆನಿನ್, ಮಾವೋ, ಪ್ರಚಂಡ ಮತ್ತಿತರರೊಂದಿಗೆ ‘ಕೆಲವು ಹತಾಶ ಹಿಂದೂಗಳನ್ನೂ’ (ಧರ್ಮ-ಧರ್ಮರಹಿತರ ಅಜಗಜಾಂತರವಿದ್ದೂ) ಸಮೀಕರಿಸಿ ಹಿಂಸೆಯನ್ನು ಒಂದೆಡೆ ಸಮರ್ಥಿಸುವ ಭೈರಪ್ಪನವರು, ಇನ್ನೊಂದೆಡೆ ಇತ್ತೀಚಿನ ಗಲಭೆಗಳಲ್ಲಿ ಈ ‘ಹತಾಶ ಹಿಂದೂಗಳ’ ಪಾತ್ರವೆಷ್ಟು ಎಂದು ಪ್ರಶ್ನಿಸುವ ಮೂಲಕ ತಮ್ಮ ಇಬ್ಬಂದಿತನವನ್ನೂ, ಎದೆ ತಟ್ಟಿ ಹೇಳಿಕೊಳ್ಳಲಾಗದ ಪುಕ್ಕಲುತನವನ್ನೂ ಮೆರೆದಿರುವುದು ಅವರ ‘ಘನತೆಗೆ’ ಶೋಭೆಯೇ? ಅಥವಾ ಇದನ್ನೆಲ್ಲಾ ಹೇಗಾದರೂ ಸಮರ್ಥಿಸಿಕೊಳ್ಳಲೇಬೇಕೆಂದು ಭೈರಪ್ಪನವರೂ ಅಷ್ಟೊಂದು ಹತಾಶರಾಗಿಬಿಟ್ಟಿದ್ದಾರೆಯೇ?

ಬಹುಷಃ ತಮ್ಮ ವಾದ ಮಂಡನೆಗಾಗಿ ಫ್ರೆಂಚ್ ಪತ್ರಕರ್ತ ಫ್ರಾಂಕ್ವಾ ಗೋತಿಯೇ ಸೆರಗಿನ ಹಿಂದೆ ಅಡಗುವುದಕ್ಕೂ ಇದೇ ಹತಾಶೆಯೇ ಕಾರಣವಾಗಿರಬಹುದು. ‘ಮತಾಂತರವನ್ನು ಸಹಿಸಲಾಗದೆ’ ಕರ್ನಾಟಕದಲ್ಲಿ ನಡೆಸಲಾಗಿರುವ ಹಿಂಸೆಯನ್ನು ಸಮರ್ಥಿಸಲು ಅರುಣಾಚಲ ಪ್ರದೇಶದ ಉದಾಹರಣೆಯನ್ನು ನೀಡಿರುವುದೇಕೆ? ಕರ್ನಾಟಕದಲ್ಲಿ ಮತಾಂತರಗಳಾಗಿರುವ ಮಾಹಿತಿಯು ಭೈರಪ್ಪನವರ ‘ಸಂಶೋಧನೆಯ’ ಆಳಕ್ಕೆ ನಿಲುಕಲಿಲ್ಲವೆ? ಅಥವಾ ಮಹೇಂದ್ರ ಕುಮಾರ್ ಬಳಿಯಿರುವ ಒಂದೆರಡು ನಿದರ್ಶನಗಳಿಂದ ಇವರೆಲ್ಲಾ ಹತಾಶರಾಗಿಬಿಟ್ಟರೇ? ಅಥವಾ ಈಶಾನ್ಯ ಮೂಲೆಯಲ್ಲಿರುವ ಅರುಣಾಚಲ ಪ್ರದೇಶದಲ್ಲಾದ ಮತಾಂತರಕ್ಕೆ ನೈಋತ್ಯ ಮೂಲೆಯ ಕರ್ನಾಟಕದಲ್ಲಿ ಪ್ರತೀಕಾರವೇ? ಇಷ್ಟಕ್ಕೂ ಕಳೆದ 33 ವರ್ಷಗಳಿಂದ ಭಾರತವಾಸಿಯಾಗಿರುವ ಫ್ರಾಂಕ್ವಾ ಗೋತಿಯೇ ಎಂಬ ವಿದೇಶೀಯನೊಬ್ಬ ಬರೆದಿರುವುದನ್ನೆಲ್ಲಾ ಯಥಾವತ್ತಾಗಿ ಆಧಾರವೆಂದು ಒಪ್ಪುವ ಭೈರಪ್ಪನವರಿಗೆ ನಲುವತ್ತು ವರ್ಷಗಳಷ್ಟು ಹಿಂದೆ ರಾಜೀವ ಗಾಂಧಿಯನ್ನು ವಿವಾಹವಾದ ಸೋನಿಯಾ ಒಂದು ದೊಡ್ಡ ಅಪಾಯವಾಗಿ ಕಾಣುವುದೇಕೆಂದು ಅರ್ಥವಾಗದು. ಅದಿರಲಿ, ಭಾರತ ಸರಕಾರದ ಜನಗಣತಿ ವಿಭಾಗದ ಜಾಲತಾಣವೇ ಲಭ್ಯವಿರುವಾಗ ಫ್ರಾಂಕ್ವಾ ಗೋತಿಯೇ ಉದ್ಧರಿಸಿರುವ ತಪ್ಪಾದ ಅಂಕಿ-ಅಂಶಗಳನ್ನು ಸಂಶೋಧಕ ಭೈರಪ್ಪನವರು ಹಾಗೆಯೇ ಬಳಸಿಕೊಂಡಿದ್ದಾರೆನ್ನುವುದು ಅವರ ‘ಸಂಶೋಧನೆಯ’ ಸತ್ವವನ್ನೇ ಪ್ರಶ್ನಾರ್ಥಕವಾಗಿಸುತ್ತದೆ. ಅಥವಾ ಈ ರೀತಿ ಒದಗಿಸಲಾಗುವ ‘ಸಾಕ್ಷ್ಯಾಧಾರಗಳ’ ಬಂಡವಾಳವೇ ಇಷ್ಟೇ ಏನೋ? ರಾಮಚಂದ್ರ ಶೆಣೈಯವರು ರಾಮನ ಜನ್ಮದ ಬಗ್ಗೆ ತಮ್ಮಲ್ಲಿ ‘ಲಭ್ಯವಿರುವ ಸಾಕ್ಷ್ಯಾಧಾರಗಳನ್ನು’ ರಾಮಾಯಣವೊಂದು ಕೇವಲ ಮಹಾಕಾವ್ಯವಷ್ಟೇ, ಇತಿಹಾಸವೇನಲ್ಲ ಎಂದು ತಿಳಿದುಕೊಂಡಿರುವ ಭೈರಪ್ಪನವರಿಗೆ ಒದಗಿಸಿದರೆ ಅದು ಅವರ ಮುಂದಿನ ಸಂಶೋಧನೆಗೆ ನೆರವಾದೀತು.

ಹೀಗೆ, ಅಧಿಕಾರವಿಲ್ಲದೆ ಒದಗಿರುವ ಹತಾಶೆಯನ್ನು ದೂರಮಾಡಲೋಸುಗ ತಾವು ನಡೆಸುತ್ತಿರುವ ಹಿಂಸೆಯನ್ನು ಹೇಗಾದರೂ ಸಮರ್ಥಿಸಿಕೊಳ್ಳಲು ಯಾರದ್ದಾದರೂ ಅಂಕಿ-ಅಂಶಗಳನ್ನು ‘ಪ್ರಬಲವಾದ ಸಾಕ್ಷ್ಯಾಧಾರಗಳನ್ನಾಗಿ’ ಮುಂದಿಡುವ ಸಂಶೋಧಕರ ಮುಂದೆ ಜಾನ್ ಸಿಕ್ವೇರ ಅವರಂಥವರು ‘ನಾವು ಏನೂ ಮಾಡಿಲ್ಲವೇ’ ಎಂದು ಅವಲತ್ತುಕೊಳ್ಳುವುದೇಕೆ? ಮೊನ್ನೆ ಚರ್ಚುಗಳಿಗೆ ಕಲ್ಲು ತೂರಿ, ವಿಗ್ರಹ ಭಂಗ ಮಾಡಿದವರು, ಅವರ ಹಿಂದೆ ನಿಂತು ಕುಮ್ಮಕ್ಕು ನೀಡಿದವರು ಮತ್ತವರ ಅದೆಷ್ಟೋ ಮಕ್ಕಳು ಕ್ರಿಶ್ಚಿಯನ್ನರು ನಡೆಸುವ ಆಸ್ಪತ್ರೆಗಳಲ್ಲಿ ಹುಟ್ಟಿದವರು ಮತ್ತು ಅಂತಹ ಶಾಲೆಗಳಲ್ಲೇ ಓದಿದವರೆನ್ನುವುದು ಎಲ್ಲರಿಗೂ ತಿಳಿದಿರುವ ಸಂಗತಿಯಾಗಿದೆ. ಆಗ ಮತಾಂತರದ ತೊಂದರೆಗೆ ಸಿಲುಕದ ಇವರುಗಳೆಲ್ಲರೂ ಈಗ ಅಧಿಕರವಿಲ್ಲದೆ ಹತಾಶರಾಗಿರುವುದರಿಂದಲೇ ಆ ಬಗ್ಗೆ ಹುಯಿಲೆಬ್ಬಿಸುವ ದುಸ್ಥಿತಿಗೆ ಬಂದಿದ್ದಾರೆ ಎನ್ನುವುದನ್ನು ಭೈರಪ್ಪನವರೇ ಸೂಚಿಸಿದ್ದಾರಲ್ಲ? ಆದರೆ ಹಿಂಸೆಯನ್ನು ಸಮರ್ಥಿಸಲು ಪೊಳ್ಳು ಕಾರಣಗಳನ್ನು ಮುಂದಿಡುವವರೆಲ್ಲರೂ ಸುಳ್ಳಿನ ಅಲ್ಪಾಯುಷ್ಯದ ಬಗ್ಗೆ ತಿಳಿದುಕೊಂಡಿದ್ದರೆ ಅವರ ಘನತೆ-ಗೌರವಗಳಿಗೆ ಸ್ವಲ್ಪ ಒಳಿತಾದೀತು. ಇಲ್ಲದೇ ಹೋದರೆ, ಸತ್ಯದ ಪ್ರವಾಹದಲ್ಲಿ ಕೊಚ್ಚಿಹೋಗಬೇಕಾದದ್ದು ಅನಿವಾರ್ಯ.

Advertisements

4 Responses to “ಸಂಘ ಪರಿವಾರದ ಹಿಂಸೆಗೆ ಸುಳ್ಳಿನ ಸಮರ್ಥನೆ”

 1. Rajesh Says:

  I saw your view towards S.L Bhairappa’s comments. this is too much and will not be tolerated by Indians. I know you are from a Anti-National Organisation. If anything happens to the Hindu-Temples…what will be your reaction?. Same…again anti Hindu….that shows your attitude towards this country…shame on you……

 2. janashaktikarnataka Says:

  ಪ್ರಿಯ ರಾಜೇಶ್, ನಿಮ್ಮ ಪ್ರತಿಕ್ರಿಯೆಯನ್ನು ನೋಡಿ ಆಶ್ಚರ್ಯವೇನಾಗಲಿಲ್ಲ. ನಿಮ್ಮ ಅತೀವ ಅಸಹನೆ ಹಾಗೂ ಬದಲಿ ಚಿಂತನೆಗಳಿಗೆ, ಭಿನ್ನಾಭಿಪ್ರಾಯಗಳಿಗೆ ನೀವು ನೀಡುವ ಮನ್ನಣೆ ಎಷ್ಟು ಎನ್ನುವುದಷ್ಟೇ ಇದರಿಂದ ಸ್ಪಷ್ಟವಾಗುತ್ತದೆ. ನಾವು ವ್ಯಕ್ತಪಡಿಸಿರುವ ಅಭಿಪ್ರಾಯಗಳನ್ನು ಭಾರತೀಯರು ಸಹಿಸುವುದಿಲ್ಲ ಎನ್ನುವಲ್ಲಿ ನೀವೊಬ್ಬರೇ ಭಾರತೀಯರು ಅಥವಾ ಅವರೆಲ್ಲರ ವಕ್ತಾರರು ಎನ್ನುವಂತೆ ಧ್ವನಿಸುತ್ತೀರಿ; ನಿಮ್ಮ ಹಿಂದೆ ಅದೆಷ್ಟು ಭಾರತೀಯರಿದ್ದಾರೆ ಎನ್ನುವುದನ್ನು ದಯವಿಟ್ಟು ಒಮ್ಮೆ ಹಿಂತಿರುಗಿ ನೋಡಿ. ಈ ಭವ್ಯ ದೇಶದ ನೆಲದಲ್ಲಿ ಬಾಂಬುಗಳನ್ನು ಸಿಡಿಸಿ, ಕೊಲೆಗೈದು, ಮಹಿಳೆಯರು- ಮಕ್ಕಳನ್ನು ಕೊಂದು, ಅವರ ಮೇಲೆ ಅತ್ಯಾಚಾರಗಳನ್ನು ನಡೆಸಿ, ಇಲ್ಲಿನ ಭವ್ಯತೆಯನ್ನು ರೂಪಿಸುವಲ್ಲಿ ಪಾಲುಗಾರರಾಗಿರುವ ಬಹುಸಂಖ್ಯಾಕ ಭಾರತೀಯರ (ಅವರು ಅದಾವುದೇ ಧರ್ಮ, ಜಾತಿಗಳಿಗೆ ಸೇರಿದವರಾಗಿರಬಹುದು) ಮೇಲೆ ಸವಾರಿ ಹೊರಟಿರುವ ಹಿಂಸಾಚಾರಿ ಅಲ್ಪಸಂಖ್ಯಾಕರ (ಅವರು ಅದಾವುದೇ ಧರ್ಮ, ಜಾತಿಗಳಿಗೆ ಸೇರಿದವರಾಗಿರಬಹುದು) ಪರವಹಿಸಿ ಮಾತನಾಡುವವರು ಮೊದಲು ತಮ್ಮ ದೇಶಪ್ರೇಮವನ್ನು, ದೇಶದ ಬಗ್ಗೆ ತಮ್ಮ ಪರಿಕಲ್ಪನೆಯನ್ನೂ ಮತ್ತೊಮ್ಮೆ ಪರೀಕ್ಷಿಸಿಕೊಳ್ಳುವುದು ಒಳ್ಳೆಯದು. ನಿಮ್ಮ ಅಸಹನೆ ನಿಮಗಾಗಲೀ, ನಮ್ಮ ದೇಶಕ್ಕಾಗಲೀ ಒಳ್ಳೆಯದಲ್ಲ. ಇದು ಕೇವಲ ಅನ್ಯಧರ್ಮೀಯರನ್ನಷ್ಟೇ ಹಿಂಸಿಸುವುದಲ್ಲ, ಸ್ವಾತಂತ್ರ್ಯವನ್ನೂ, ಸ್ವತಂತ್ರ ಚಿಂತನೆಯನ್ನೂ ಪ್ರೀತಿಸುವ ಎಲ್ಲರನ್ನೂ (ಅವರು ಅದಾವುದೇ ಧರ್ಮ, ಜಾತಿಗಳಿಗೆ ಸೇರಿದವರಾಗಿರಬಹುದು) ಹಿಂಸಿಸುತ್ತದೆ ಎನ್ನುವುದನ್ನು ಮರೆಯಬೇಡಿ. ಈ ದ್ವೇಷದ ದಳ್ಳುರಿಯಲ್ಲಿ ಅದನ್ನು ಹೊತ್ತಿಸಿದವರೂ ಕರಟುತ್ತಾರೆನ್ನುವುದು ಗೊತ್ತಿದ್ದರೆ ಒಳ್ಳೆಯದು. ಹಿಟ್ಲರನೂ ಕೊನೆಗೊಮ್ಮೆ ಆತ್ಮಹತ್ಯೆ ಮಾಡಿಕೊಳ್ಳಬೇಕಾಯಿತು ತಾನೇ?

  ನಾವು ರಾಷ್ಟ್ರ ವಿರೋಧಿ ಸಂಘಟನೆಗೆ ಸೇರಿದವರೆನ್ನುವುದು ನಿಮಗೆ ಚೆನ್ನಾಗಿ ಗೊತ್ತಿದೆ ಎಂದು ಹೇಳಿಕೊಂಡಿದ್ದೀರಿ; ಅದಾವುದು ಎನ್ನುವುದನ್ನೂ ತಿಳಿಸಿದ್ದರೆ ಉಪಕಾರವಾಗುತ್ತಿತ್ತು, ಇಡೀ ಲೋಕಕ್ಕೆ ನಿಮ್ಮ ಸಾಮರ್ಥ್ಯದ ಪರಿಚಯವಾಗುತ್ತಿತ್ತು.

  ಹಿಂದೂ ದೇವಸ್ಥಾನಗಳಿಗೇನಾದರೂ ಆದರೆ ನಮ್ಮ ಪ್ರತಿಕ್ರಿಯೆಯೇನಾಗಿರುತ್ತದೆ ಎಂದು ತಿಳಿಯಬಯಸಿದ್ದೀರಲ್ಲಾ? ಸಂತೋಷ, ಇಲ್ಲಿದೆ ನೋಡಿ: ನಮ್ಮನ್ನು ಭರತ ಖಂಡದ ಚರಿತ್ರೆಯುದ್ದಕ್ಕೂ ಅಸ್ಪೃಷ್ಯರನ್ನಾಗಿಸಿ ದೇವಸ್ಥಾನಗಳಿಂದಲೂ, ಸಮಾಜದ ಮುಖ್ಯವಾಹಿನಿಯಿಂದಲೂ ಹೊರಗಿಟ್ಟು ಸದಾ ಅವಕಾಶವಂಚಿತರನ್ನಾಗಿಸಲಾಗಿತ್ತೆನ್ನುವುದು ನಿಮಗರಿಯುವುದಾದರೂ ಹೇಗೆ? ದೇವಸ್ಥಾನಗಳೊಳಗೆ ಎಂದೂ ಕಾಲಿರಿಸಲಾಗದಿದ್ದ ನಮ್ಮಂತಹ ಅಸ್ಪೃಷ್ಯರೆನಿಸಿಕೊಂಡವರಿಗೆ ಅವು ಇದ್ದರೇನು, ಇಲ್ಲದಿದ್ದರೇನು? ಗರ್ಭಗುಡಿಯೊಳಗೆ, ‘ದೇವರ’ ಅತಿಸನಿಹದಲ್ಲಿರುವ ನಿಮ್ಮಂತವರಿಗಷ್ಟೇ ಅದರಿಂದ ಪ್ರಯೋಜನ, ನೀವದನ್ನು ಉಳಿಸಿಕೊಳ್ಳಿ. ಇನ್ನು ಭಾರತವೆಂದರೆ ಬರೇ ದೇವಸ್ಥಾನಗಳಷ್ಟೇ ಅಲ್ಲ ಎನ್ನುವುದನ್ನು ನೀವು ಅರ್ಥ ಮಾಡಿಕೊಂಡರೆ ಒಳ್ಳೆಯದು. ದೇವಸ್ಥಾನಗಳು ಈ ದೇಶದಲ್ಲಿ ಕಟ್ಟಲ್ಪಡುವ ಎಷ್ಟೋ ಸಾವಿರ ವರ್ಷಗಳ ಮೊದಲು ನಾವು ಇಲ್ಲಿನ ಆದಿವಾಸಿಗಳಾಗಿದ್ದೆವು, ಈ ನೆಲ ನಮ್ಮದು. ನಮ್ಮನ್ನು ದೇಶದ್ರೋಹಿಗಳೆಂದು ತೀರ್ಪು ಹೊರಡಿಸುವ ವಿಶೇಷವಾದ ಹಕ್ಕು ನಿಮಗೆಲ್ಲಿಂದ ಬಂತೆನ್ನುವುದನ್ನೂ ಸ್ವಲ್ಪ ವಿಷದೀಕರಿಸಿದರೆ ಸರ್ವರಿಗೂ ಒಳಿತಾದೀತು.

 3. ಸಂಘ ಪರಿವಾರದ ಎರಡು ನಾಲಿಗೆ ಬಟಾಬಯಲು! « gurujana Says:

  […] Posted in Uncategorized | 2 Comments » […]

 4. ಸಂಘ ಪರಿವಾರದ ಎರಡು ನಾಲಿಗೆ ಬಟಾಬಯಲು! « ಗುರುಜನ Says:

  […] Posted in Uncategorized | 2 Comments » […]

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s


%d bloggers like this: