ಜಾತಿ ವ್ಯವಸ್ಥೆ, ಕೋಮುವಾದ ಮತ್ತು ಸಾಮಾಜಿಕ ನ್ಯಾಯ

ನಾವಿಂದು ಕ್ರಿ.ಶ. ಇಪ್ಪತ್ತೊಂದನೇ ಶತಮಾನದಲ್ಲಿದ್ದೇವೆ. ಒಂದೆಡೆ, ಅತ್ಯದ್ಭುತವಾದ ವೈಜ್ಞಾನಿಕ ಸಂಶೋಧನೆಗಳೂ, ತಂತ್ರಜ್ಞಾನದಲ್ಲಾಗುತ್ತಿರುವ ಪ್ರಗತಿಗಳೂ ಮಾನವನ ಜೀವನವನ್ನು ಹಸನುಗೊಳಿಸುವಲ್ಲಿ ನೆರವಾಗುತ್ತಿರುವ ಕಾಲದಲ್ಲಿಯೇ, ಮನುಕುಲವನ್ನು ದಾಸ್ಯದ ಅಂಧಕಾರದತ್ತ ತಳ್ಳುವ ಹುನ್ನಾರವು ಕೂಡಾ ಇನ್ನೊಂದೆಡೆ ನಡೆಯುತ್ತಿರುವುದು ವಿಪರ್ಯಾಸವೇ ಸರಿ. ಧರ್ಮ, ಕೋಮು, ಜಾತಿ, ಪಂಗಡ, ಭಾಷೆ, ಪ್ರದೇಶ ಇತ್ಯಾದಿಗಳ ಹೆಸರಲ್ಲಿ ಮನುಷ್ಯ-ಮನುಷ್ಯರ ಬೆಸುಗೆಯನ್ನು ಮುರಿದು, ಅಶಾಂತಿಯನ್ನೂ, ಅರಾಜಕತೆಯನ್ನೂ ಸೃಷ್ಟಿಸುವಲ್ಲಿ ವಿವಿಧ ವಿಚ್ಛಿದ್ರಕಾರಿ ಶಕ್ತಿಗಳು ಸಫಲರಾಗುತ್ತಿರುವಂತೆ ತೋರುತ್ತಿರುವ ಇಂದಿನ ಸನ್ನಿವೇಶದಲ್ಲಿ ಜನಸಾಮಾನ್ಯರು, ಅದರಲ್ಲೂ ಯುವಜನರು, ತಮ್ಮ ಭವಿಷ್ಯದ ಒಳಿತಿಗಾಗಿ ಪ್ರಗತಿಪರವಾದ ಪಥವನ್ನು ಹಿಡಿದು ಮುನ್ನಡೆಯಬೇಕಾದ ಅಗತ್ಯವು ಹಿಂದೆಂದಿಗಿಂತಲೂ ಹೆಚ್ಚಾಗಿ ಕಂಡುಬರುತ್ತಿದೆ. ಸತ್ಯದ ಅರಿವು ಯಾವತ್ತೂ ನಮ್ಮ ಕೈದೀವಿಗೆಯಾಗಿದ್ದು, ಪ್ರಸಕ್ತ ಚರ್ಚೆಯಲ್ಲಿರುವ ವಿಚಾರಗಳ ಬಗ್ಗೆ ಸರಿಯಾದ ಮಾಹಿತಿಯನ್ನು ಹೊಂದಿರುವುದು ಅತ್ಯಗತ್ಯ; ಮನುಷ್ಯನ ಉಗಮ, ಧರ್ಮ-ಜಾತಿಗಳ ಉಗಮ ಮತ್ತು ಬೆಳವಣಿಗೆಗಳ ಇತಿಹಾಸವನ್ನು ನಾವು ಅರಿಯಬೇಕಾದದ್ದು ಅತ್ಯಗತ್ಯ.

ಮಾನವನ ಉಗಮ:

ಚಾರ್ಲ್ಸ್ ಡಾರ್ವಿನ್

ಬ್ರಿಟಿಷ್ ಜೀವವಿಜ್ಞಾನಿ ಚಾರ್ಲ್ಸ್ ಡಾರ್ವಿನನ ಜೀವ ವಿಕಾಸವಾದಕ್ಕೀಗ ನೂರೈವತ್ತು ವರ್ಷ. ಓರ್ವ ಪಾದ್ರಿಯಾಗಲು ತರಬೇತಾಗಿದ್ದ ಡಾರ್ವಿನ್, ಎಚ್ ಎಮ್ ಎಸ್ ಬೀಗಲ್ ನೌಕೆಯಲ್ಲಿ ವಿಶ್ವ ಪರ್ಯಟನೆ ಮಾಡುತ್ತಾ ಇಂಡೋನೇಶ್ಯಾದ ಬಳಿಯಿರುವ ಗಲಪಗೋ ದ್ವೀಪಗಳಲ್ಲಿ ತಾನು ಕಂಡ ವಿಭಿನ್ನ ರಚನೆಯ ಹಲವು ಪ್ರಾಣಿ-ಪಕ್ಷಿಗಳಿಂದ ಪ್ರೇರಿತನಾದನು; ಜೀವಿಗಳು ಯಾರೊಬ್ಬನ ಸೃಷ್ಟಿಯೂ ಆಗಿರದೆ ಭೂಮಿಯ ಮೇಲಿನ ಪರಿಸ್ಥಿತಿಗನುಗುಣವಾಗಿ ಒಂದರಿಂದೊಂದು ವಿಕಾಸಗೊಂಡವು ಎಂಬ ಸಿದ್ದಾಂತವನ್ನು ಮಂಡಿಸಿದನು. ಮೊದಲಲ್ಲಿ ಸಾಕಷ್ಟು ಪ್ರತಿರೋಧವನ್ನು ಎದುರಿಸಿದರೂ, ವಿಕಾಸವಾದವನ್ನು ಪುಷ್ಠೀಕರಿಸುವ ಪ್ರಬಲವಾದ ಸಾಕ್ಷ್ಯಾಧಾರಗಳು ದೊರೆತಾಗ ಡಾರ್ವಿನನ ಸಂಶೋಧನೆಯು ವಿಶ್ವಮಾನ್ಯವಾಯಿತು. ನಂತರದ ವರ್ಷಗಳಲ್ಲಿ ವಂಶವಾಹಿಗಳ ಕುರಿತು ನಡೆದ, ನಡೆಯುತ್ತಿರುವ ಸಂಶೋಧನೆಗಳೆಲ್ಲವೂ ಅದನ್ನು ಇನ್ನಷ್ಟು ಬಲಪಡಿಸಿದವು. [ಆದರೂ, ಹಲವು ಧರ್ಮಗಳು ಮತ್ತು ಧರ್ಮಾನುಯಾಯಿ ನಾಯಕರುಗಳು ಇನ್ನೂ ಡಾರ್ವಿನನ ವಾದವನ್ನು ಒಪ್ಪದೆ, ಜೀವಿಗಳೆಲ್ಲವೂ ‘ಬುದ್ದಿವಂತನ ಅದ್ಭುತ ಸೃಷ್ಟಿ’ ಎಂದೇ ವಾದಿಸುತ್ತಿರುತ್ತಾರೆ].

ಮನುಷ್ಯನ ವಿಕಾಸವು ಆಫ್ರಿಕಾ ಖಂಡದ ಕಾಡುಗಳಲ್ಲಾಗಿರಬಹುದೆಂಬ ಡಾರ್ವಿನನ ತರ್ಕವನ್ನು ಪುಷ್ಠೀಕರಿಸುವ ಸಾಕ್ಷ್ಯಾಧಾರಗಳು ದೊರೆತಿವೆ. [ಭೂಮಿಯ ಭೂಭಾಗಗಳೆಲ್ಲವೂ ಒಂದು ಕಾಲದಲ್ಲಿ ಗೊಂಡಾವನವೆಂಬ ಒಂದೇ ಭೂಭಾಗವಾಗಿದ್ದು, ಕಾಲಕ್ರಮೇಣ ಸಿಡಿದು ಇಂದಿನ ಖಂಡಗಳಾಗಿ ಪ್ರತ್ಯೇಕಗೊಂಡವು ಎನ್ನುವುದಕ್ಕೆ ಇದೀಗ ಪುರಾವೆಗಳು ಲಭಿಸುತ್ತಿವೆ.] ಸುಮಾರು ಎರಡರಿಂದ ಮೂರು ಲಕ್ಷ ವರ್ಷಗಳ ಹಿಂದೆ ವಾನರರಿಂದ ಆದಿಮಾನವರಾಗಿ ನಂತರ ಆಧುನಿಕ ಮಾನವನಾಗಿ ವಿಕಾಸ ಹೊಂದಿದ ಬಳಿಕ ಇತರ ಭೂಭಾಗಗಳತ್ತ ಮಾನವನ ನಡಿಗೆಯು ಆರಂಭಗೊಂಡಿತು; ಏಷ್ಯಾ, ಆಸ್ಟ್ರೇಲಿಯಾ, ಯೂರೋಪ್ ಮತ್ತು ಅಮೆರಿಕಾಗಳನ್ನು ಆತನು ಸೇರಿಕೊಂಡನು. ದಕ್ಷಿಣ ಭಾರತದ ಕೆಲವು ಆದಿವಾಸಿಗಳಲ್ಲಿ ಆಫ್ರಿಕಾದ ಆದಿವಾಸಿಗಳಲ್ಲಿರುವ ವಂಶವಾಹಿಗಳನ್ನು ಗುರುತಿಸಲಾಗಿದ್ದು, ಮಾನವನು ವಿಶ್ವವ್ಯಾಪಿಯಾದ ಹಾದಿಯ ಬಗ್ಗೆ ಇವು ಕುರುಹನ್ನು ನೀಡಿವೆ. ಅಂದಿನಿಂದ ಇಂದಿನವರೆಗೆ ಮಾನವನ ಖಂಡಾಂತರ ನಡಿಗೆಯು ಮುಂದುವರಿದಿದೆ, ಮನುಕುಲವೆಲ್ಲಾ ಒಂದೇ ಎನ್ನುವುದನ್ನು ದೃಢಪಡಿಸುತ್ತಿದೆ.

ಧರ್ಮ-ಜಾತಿಗಳ ಉಗಮ:

ಮಾನವನ ನಡಿಗೆ - ಆಫ್ರಿಕಾದಿಂದ ಎಲ್ಲೆಡೆಗೆ

ಸುಮಾರು ಒಂದೂವರೆ ಲಕ್ಷ ವರ್ಷಗಳಷ್ಟು ಹಿಂದೆ ವಿಕಾಸಗೊಂಡ ಮಾನವನು ಬಹು ಕಾಲದವರೆಗೆ ತನ್ನ ತವರಾದ ಕಾಡಿನಲ್ಲೇ ಜೀವಿಸಿದ್ದ. ತನ್ನದೇ ಆದ ಗುಂಪನ್ನು ಕಟ್ಟಿಕೊಂಡು ಜತೆಯಾಗಿ ಬಾಳುತ್ತಿದ್ದ. ಮಾತೃ ಪ್ರಧಾನವಾಗಿದ್ದ ಈ ವ್ಯವಸ್ಥೆಯಲ್ಲಿ ಒಂದೇ ಕುಟುಂಬಕ್ಕೆ ಸೇರಿದವರೆಲ್ಲಾ ಒಟ್ಟಾಗಿ ಜೀವಿಸುತ್ತಿದ್ದರು; ಬೇಟೆಯಾಡಿ, ಕಾಡಿನಲ್ಲಿ ದೊರೆಯುವ ಆಹಾರೋತ್ಪನ್ನಗಳನ್ನು ಸಂಗ್ರಹಿಸಿ ಹಂಚಿ ತಿಂದು ಬಾಳುವುದು ಆಗಿನ ವ್ಯವಸ್ಥೆಯಾಗಿತ್ತು. ಕೇವಲ ಸುಮಾರು ಹತ್ತು ಸಾವಿರ ವರ್ಷಗಳ ಹಿಂದೆ ಆಹಾರಕಾಗಿ ಧಾನ್ಯಗಳನ್ನು ಬೆಳೆಯುವ ಕೃಷಿಕೆಲಸಗಳನ್ನು ತೊಡಗಿದ ನಂತರ ಆಸ್ತಿಯ ಪರಿಕಲ್ಪನೆ ಮೂಡಿತಲ್ಲದೆ, ಅದರ ಆಧಾರದಲ್ಲಿ ಗುಂಪುಗಳು, ಅವಕ್ಕೆ ನಾಯಕರು, ನಂತರ ರಾಜರುಗಳು ಇವೇ ಮುಂತಾದ ವ್ಯವಸ್ಥೆಗಳು ರೂಪುಗೊಂಡವು. ಆಸ್ತಿಗಾಗಿ ಜಗಳಗಳೂ, ಯುದ್ಧಗಳೂ ನಡೆದವು. ಕೃಷಿ ಆಧಾರಿತ ಜೀವನಕ್ರಮವನ್ನು ಅಳವಡಿಸಿಕೊಂಡ ಪಂಗಡಗಳು ಆಹಾರದ ವಿಷಯದಲ್ಲಿ ಸ್ವಾವಲಂಬಿಗಳಾಗಿದ್ದರಿಂದ ಇತರ ಚಟುವಟಿಕೆಗಳತ್ತ ಗಮನ ಹರಿಸಲು ಸಾಧ್ಯವಾಗಿ ಇನ್ನಿತರ ಕುಶಲಕೈಗಾರಿಕೆಗಳೂ, ಉದ್ದಿಮೆಗಳೂ ಒಂದೊಂದಾಗಿ ಬೆಳೆದವು. ಅದರ ಜೊತೆಗೆ ಶ್ರಮದ ವಿಭಜನೆಯಾಗಿ ವಿವಿಧ ಕಸುಬುದಾರರು ಹುಟ್ಟಿಕೊಂಡಂತೆ ಸಮಾಜದಲ್ಲಿ ವಿವಿಧ ಶ್ರೇಣಿಗಳೂ ಉಂಟಾದವು; ಕೆಲವರು ಹೆಚ್ಚು ಆಸ್ತಿವಂತರೂ, ಧನಿಕರೂ ಆದರೆ, ಇನ್ನು ಕೆಲವರು ಬಡವರಾದರು. ಇನ್ನೊಂದೆಡೆ, ಈ ಪಂಗಡಗಳ ಜನಸಂಖ್ಯೆಯು ಬೆಳೆದಂತೆ ಆಹಾರದ ಅಗತ್ಯವೂ ಹೆಚ್ಚಿ ಇನ್ನಷ್ಟು ಕಾಡುಗಳನ್ನು ಕೃಷಿಭೂಮಿಯಾಗಿ ಪರಿವರ್ತಿಸುವ ಕೆಲಸವೂ ನಿರಂತರವಾಗಿ ನಡೆಯಿತು; ಈ ವಿಸ್ತರಣೆಯ ನೆಪದಲ್ಲಿ ಕಾಡುಗಳಲ್ಲಿದ್ದ ಆದಿವಾಸಿಗಳೊಂದಿಗೆ ಕಾದಾಟಗಳಾಗಿ ಹಲವು ಆದಿವಾಸಿಗಳು ತಮ್ಮ ನೆಲೆಯನ್ನು ಕಳೆದುಕೊಳ್ಳುವಂತಾಯಿತು., ಇಂತಹಾ ಸಾಮಾಜಿಕ ಅಸಮಾನತೆಗಳು ಹಾಗೂ ಆಸ್ತಿ-ಪಾಸ್ತಿಗಾಗಿ ಆಕ್ರಮಣಗಳು ಇಂದಿಗೂ ಮುಂದುವರಿದಿರುವುದನ್ನು ನಾವು ಕಾಣಬಹುದು.

ಪ್ರಕೃತಿಯ ಭಾಗವೇ ಆಗಿ ಕಾಡುಗಳಲ್ಲಿ ಜೀವಿಸುತ್ತಿದ್ದ ಮನುಷ್ಯನ ಕಲ್ಪನೆಗೂ, ಸಾಮರ್ಥ್ಯಕ್ಕೂ ನಿಲುಕದ ಹಲವಾರು ನೈಸರ್ಗಿಕ ಘಟನೆಗಳು ಸಹಜವಾಗಿಯೇ ಅವನಲ್ಲಿ ಆತಂಕವನ್ನೂ, ಭಯವನ್ನೂ ಮೂಡಿಸಿದವು. ಇಂತಹವುಗಳಿಂದ ತನಗೇನೂ ಅಪಾಯವಾಗದಿರಲೆಂದು ಪ್ರಕೃತಿಯ ಮಹಾನ್ ಶಕ್ತಿಗಳನ್ನು ಪೂಜಿಸುವ ಕ್ರಮವೂ ಆರಂಭಗೊಂಡಿತು. ಸೂರ್ಯ, ಚಂದ್ರ, ಬೆಂಕಿ, ಗಾಳಿ ಇತ್ಯಾದಿಯಾಗಿ ‘ಪ್ರಕೃತಿ ದೇವತೆಗಳ’ ಆರಾಧನೆಯನ್ನು ಬಹಳಷ್ಟು ಸಮಾಜಗಳಲ್ಲಿ ನಾವು ಇಂದಿಗೂ ಕಾಣುತ್ತೇವೆ. ಭಾರತದಲ್ಲಿರುವ ಹಲವಾರು ಆದಿವಾಸಿ-ಬುಡಕಟ್ಟು ಜನಾಂಗಗಳಲ್ಲಿ ಇಂದಿಗೂ ಯಾವುದೇ ಆಧುನಿಕ ಧರ್ಮಗಳ ಸೋಂಕಿಲ್ಲದೆ, ಪ್ರಕೃತಿ ದೇವತೆಗಳ ಆರಾಧನೆಯೇ ಮುಖ್ಯವಾಗಿರುವುದನ್ನು ಕಾಣಬಹುದು.

ಸಮಾಜದಲ್ಲಿ ಅಸಮಾನತೆಗಳು ಹೆಚ್ಚಿದಂತೆ ಉಳ್ಳವರು ಇಲ್ಲದವರನ್ನು ಇನ್ನಷ್ಟು ಶೋಷಿಸಿ, ಪೀಡಿಸಿ ತಮ್ಮ ಹದ್ದುಬಸ್ತಿನಲ್ಲಿಟ್ಟುಕೊಳ್ಳುವುದಕ್ಕೆ ಹೊಸ ಹೊಸ ವಿಧಾನಗಳ ಬಳಕೆಯು ಆರಂಭವಾಯಿತೆನ್ನಬಹುದು. ಸಾರ್ವತ್ರಿಕವಾಗಿದ್ದ ಪ್ರಕೃತಿ ಪೂಜೆಯು ನಿಧಾನವಾಗಿ ಪುರೋಹಿತವರ್ಗದ ಪಾಲಾಯಿತು; ಹೊಸ ಹೊಸದಾದ ಅನೇಕ ದೇವತೆಗಳೂ ಹುಟ್ಟಿಕೊಂಡವು. ಬಲಿಷ್ಠರಾಗಿದ್ದ ರಾಜರುಗಳು, ವಿಶೇಷ ಸಾಮರ್ಥ್ಯಗಳನ್ನು ಹೊಂದಿದ್ದವರು ಮುಂತಾದವರೂ ಕಾಲಕ್ರಮೇಣ ದೈವತ್ವವನ್ನು ಸಂಪಾದಿಸಿದರು.[ಕೆಲವು ಚಲನಚಿತ್ರ ತಾರೆಯರು ದೈವತ್ವಕ್ಕೇರುವುದನ್ನು ಸಮಕಾಲೀನ ಸಮಾಜದಲ್ಲಿಯೂ ನಾವು ಕಾಣುತ್ತೇವೆ!] ಆಳುವ/ಬಲಿಷ್ಠ ವರ್ಗಗಳು ಪುರೋಹಿತ ವರ್ಗದೊಂದಿಗೆ ಸೇರಿಕೊಂಡು ಶೋಷಣೆಯನ್ನು ವ್ಯವಸ್ಥಿತಗೊಳಿಸಿದರು; ‘ಧರ್ಮ’ವು ಸಾಮಾಜಿಕ ವ್ಯವಸ್ಥೆಯ ಅವಿಭಾಜ್ಯ ಅಂಗವೇ ಆಗಿಬಿಟ್ಟಿತು.

ಈ ಶೋಷಣೆಯ ವಿರುದ್ಧ ಅಲ್ಲಲ್ಲಿ ಬಂಡಾಯಗಳೂ ನಡೆದವು. ಯೇಸು, ಬುದ್ಧ, ನಾನಕ, ಬಸವಣ್ಣ ಮುಂತಾದವರು ಸಮಕಾಲೀನ ವ್ಯವಸ್ಥೆಯ ವಿರುದ್ಧ ಬಂಡೆದ್ದು ಬೇರೆ ದಾರಿ ತೋರಿದರು. ಕಾಲಕ್ರಮೇಣ ಇವರು ತೋರಿದ ಬದಲಿ ದಾರಿಗಳೇ ಪ್ರತ್ಯೇಕ ಧರ್ಮಗಳಾಗಿ ಬೆಳೆದವು; ಅವುಗಳಲ್ಲಿ ಕೆಲವು ಇನ್ನಷ್ಟು ಶೋಷಣೆಯ, ಪುರೋಹಿತ ಪ್ರಾಬಲ್ಯದ ಧರ್ಮಗಳಾಗಿ ಬೆಳೆದವು ಎನ್ನುವುದೊಂದು ವಿಪರ್ಯಾಸವೇ ಸರಿ. ಭಾರತದ ನೆಲದಲ್ಲಿ ಹುಟ್ಟಿದ ಬೌದ್ಧ, ಜೈನ, ಸಿಕ್ಖ, ಲಿಂಗಾಯತ ಇತ್ಯಾದಿ ಧರ್ಮಗಳು ನಂತರದ ವರ್ಷಗಳಲ್ಲಿ ನಡೆದ ಅವ್ಯಾಹತ ತಂತ್ರಗಳಿಂದಾಗಿ ಮತ್ತೆ ಇವೆಲ್ಲವೂ ಸನಾತನ ಧರ್ಮದ ಭಾಗಗಳೇನೋ ಎನ್ನುವಂತಹ ಪರಿಸ್ಥಿತಿಯನ್ನು ನಿರ್ಮಿಸಲಾದದ್ದನ್ನು ನಾವಿಂದು ಕಾಣುತ್ತಿದ್ದೇವೆ. ಅದೇ ರೀತಿ, ದೇವರೊಬ್ಬನೇ ಮತ್ತು ಅವನು ನಮ್ಮವನೇ ಎಂದು ಬೋಧಿಸಿದ ಧರ್ಮಗಳಲ್ಲಿಯೂ ಕಾಲಕ್ರಮೇಣ ಹಲವು ಉಪದೇವತೆಗಳು ಹುಟ್ಟಿಕೊಂಡವು, ಪೂಜೆಯ ವ್ಯಾಪ್ತಿಯನ್ನು ಹೆಚ್ಚಿಸಿದವು. ವಿಗ್ರಹಾರಾಧನೆಯನ್ನು ಖಂಡಿಸಿದ ಧರ್ಮಗಳಲ್ಲೂ ಚಿತ್ರಗಳು, ನಿರ್ದಿಷ್ಟ ಹೆಸರುಗಳು, ರಚನೆಗಳು ಮತ್ತು ಕಾಲಕ್ರಮೇಣ ತಮ್ಮವೇ ಆದ ಮೂರ್ತಿಗಳು ಅಥವಾ ಚಿಹ್ನೆಗಳು ಆರಾಧನಾ ವಸ್ತುಗಳಾದವು.

ಜಗತ್ತಿನ ವಿವಿಧೆಡೆಗಳಲ್ಲಿ ಧರ್ಮಗಳ ಹಿಂಬಾಲಕರೊಳಗೆ ಮಹಾಯುದ್ಧಗಳೇ ನಡೆದಿವೆ, ಧರ್ಮಯುದ್ಧಗಳ ಹೆಸರಲ್ಲಿ ರಕ್ತದ ಕೋಡಿಯೇ ಹರಿದಿದೆ. ಎಲ್ಲಾ ಧರ್ಮಗಳು ಶಾಂತಿಯನ್ನೂ, ಸಹಿಷ್ಣುತೆಯನ್ನೂ ಬೋಧಿಸುತ್ತವೆಯೆಂದು ಹೇಳಲಾಗುತ್ತದೆಯಾದರೂ, ಪ್ರತಿಯೊಂದು ಧರ್ಮವೂ ತನ್ನ ಶ್ರೇಷ್ಠತೆಯನ್ನು ಸಾರುವ ಮೂಲಕ ಪ್ರತ್ಯಕ್ಷವಾಗಿಯೂ, ಪರೋಕ್ಷವಾಗಿಯೂ ಧರ್ಮಗಳ ನಡುವಿನ ಕಲಹಗಳನ್ನು ಪ್ರಚೋದಿಸುತ್ತವೆ, ಸಮರ್ಥಿಸುತ್ತವೆ. ಧರ್ಮದ ಹೆಸರಲ್ಲಾದ ಸಾವುನೋವುಗಳು ಬೇರೆಲ್ಲಾ ಯುದ್ದಗಳಲ್ಲಾದ ಸಾವುನೋವುಗಳಿಗಿಂತಲೂ ಹೆಚ್ಚು ಎನ್ನುವುದು ಮನುಕುಲದ ಚರಿತ್ರೆಯಲ್ಲಿ ದಾಖಲಾಗಿರುವ ಸತ್ಯವಾಗಿದೆ. ಧರ್ಮದ ಹೆಸರಿನಲ್ಲಿ ನಡೆಯುವ ಹೋರಾಟಗಳಾಗಲೀ, ‘ಧರ್ಮ ಯುದ್ಧಗಳಾಗಲೀ’ ಜನಸಾಮಾನ್ಯರಿಗೆ ಯಾತನೆಯನ್ನಲ್ಲದೆ ಬೇರಾವುದೇ ಫಲವನ್ನೂ ನೀಡಲಾರವು. ಅಂತಹಾ ಹಿಂಸೆಯ ಮುಂಚೂಣಿಯಲ್ಲಿ ಕೆಳವರ್ಗಗಳ ಜನರನ್ನು ಬಳಸಿಕೊಂಡು, ಮೇಲ್ವರ್ಗಗಳು ಹಾಗೂ ಪುರೋಹಿತ ವರ್ಗಗಳು ತಮ್ಮ ಅಧಿಕಾರವನ್ನೂ, ಸಮಾಜದ ಮೇಲಿನ ಹಿಡಿತವನ್ನೂ ಬಲಪಡಿಸಲು ಪ್ರಯತ್ನಿಸುತ್ತವೆ ಮತ್ತು ಅವರ ಈ ಯತ್ನಕ್ಕೆ ಧನಿಕರು, ಬಂಡವಾಳಶಾಹಿಗಳು, ಭೂಮಾಲಿಕರು ಮತ್ತಿತರ ಲಾಭಬಡುಕರ ಬೆಂಬಲವು ಸದಾ ಇರುತ್ತದೆ. ನಷ್ಟಗಳೇನೇ ಇದ್ದರೂ ಅದು ಕೆಳವರ್ಗದವರಿಗೆ, ಲಾಭಗಳೆಲ್ಲವೂ ಅವರನ್ನು ಬಳಸಿಕೊಂಡ ಮೇಲ್ವರ್ಗದವರಿಗಷ್ಟೇ. ಅಧಿಕಾರದಲ್ಲಾಗಲೀ, ಸಂಪತ್ತಿನಲ್ಲಾಗಲೀ ಕೆಳವರ್ಗಗಳ ಜನರು ಯಾವುದೇ ಪಾಲನ್ನು ಕೇಳುವಂತಿಲ್ಲ.

ಪುರೋಹಿತ ವರ್ಗ ಹಾಗೂ ಅವರ ಕಪಿಮುಷ್ಠಿಯಲ್ಲಿರುವ ಆಳುವ ವರ್ಗಗಳು ಸದಾ ಕಾಲವೂ ವೈಜ್ಞಾನಿಕ ಹಾಗೂ ವೈಚಾರಿಕ ಚಿಂತನೆಗಳಿಂದ ಭಯಗೊಂಡು ಅವುಗಳನ್ನು ಮೆಟ್ಟಿಹಾಕಲು ಪ್ರಯತ್ನಿಸಿವೆ. ಸಾಕ್ರಟೀಸ್, ಗೆಲಿಲಿಯೋ, ಜಿಯೋರ್ಡಾನೋ ಬ್ರುನೊ, ಚಾರ್ವಾಕರು, ಕಣಾದ ಮುಂತಾದ ಎಷ್ಟೋ ಮಂದಿ ಮತಿಭ್ರಾಂತರೆಂದು ಜರೆಯಲ್ಪಟ್ಟಿರುವ, ಹಿಂಸೆಗೊಳಗಾಗಿರುವ ಅಥವಾ ಜೀವವನ್ನೇ ಕಳೆದುಕೊಂಡಂತಹ ನಿದರ್ಶನಗಳು ನಮ್ಮ ಮುಂದಿವೆ. ಇಂದಿಗೂ ಕೂಡಾ ಬುದ್ಧಿಜೀವಿಗಳು ಹಾಗೂ ವಿಚಾರವಂತರನ್ನು ಅವಹೇಳನಕಾರಿಯಾಗಿ ನಿಂದಿಸುವ ಅಭ್ಯಾಸವನ್ನು ಪುರೋಹಿತಶಾಹಿ ಶಕ್ತಿಗಳು ಮುಂದುವರಿಸಿವೆ. ‘ಧರ್ಮದ ವಕ್ತಾರರುಗಳು’ ವಿಜ್ಞಾನ ಹಾಗೂ ತಂತ್ರಜ್ಞಾನಗಳ ಸಕಲ ಪ್ರಯೋಜನಗಳನ್ನು ಪಡೆಯುವಲ್ಲಿ ಯಾವ ಹಿಂಜರಿಕೆಯನ್ನು ತೋರದಿದ್ದರೂ, ವಿಜ್ಞಾನ ಹಾಗೂ ವೈಚಾರಿಕ ಚಿಂತನೆಗಳನ್ನು ಖಂಡಿಸುವಲ್ಲಿ ಇಂದಿಗೂ ಕೂಡಾ ಮುಂಚೂಣಿಯಲ್ಲಿರುವುದು ಅವರ ಇಬ್ಬಗೆಯ ನೀತಿಗೆ ಸ್ಪಷ್ಟವಾದ ನಿದರ್ಶನವಾಗಿದೆ.

ಧರ್ಮವನ್ನು ರಾಜಕೀಯ ಉದ್ದೇಶಗಳಿಗಾಗಿಯೂ, ಅಧಿಕಾರಗ್ರಹಣಕ್ಕಾಗಿಯೂ ದುರ್ಬಳಕೆ ಮಾಡುವ ಪರಿಪಾಠವು ಇಂದಿಗೂ ಮುಂದುವರಿದಿದೆ. ಅಮೆರಿಕಾದಲ್ಲಿ ದೊಡ್ಡ ಬಂಡವಾಳಶಾಹಿಗಳು, ನವ ವಸಾಹತುವಾದಿಗಳು ಹಾಗೂ ಸಾಮ್ರಾಜ್ಯಶಾಹಿ ವಿಸ್ತರಣಾವಾದಿಗಳೆಲ್ಲರನ್ನು ಪ್ರತಿನಿಧಿಸುವ ರಿಪಬ್ಲಿಕನ್ ಪಕ್ಷವು ಕ್ರಿಶ್ಚಿಯನ್ ಧರ್ಮವನ್ನು ಮತ್ತದರ ವಿಜ್ಞಾನ ವಿರೋಧಿ, ಗರ್ಭಪಾತ ವಿರೋಧಿ ಧೋರಣೆಗಳನ್ನು ಊರುಗೋಲಾಗಿ ಬಳಸುತ್ತದೆಯಲ್ಲದೆ, ಈ ವಿಷಯಗಳನ್ನು ಚುನಾವಣಾ ಪ್ರಣಾಲಿಕೆಯೊಳಕ್ಕೂ ತುರುಕಿಸುತ್ತದೆ. ಭಾರತದಲ್ಲಿಯೂ ಬಂಡವಾಳಶಾಹಿ, ಪುರೋಹಿತಶಾಹಿ ಸರ್ವಾಧಿಕಾರಿ ಆಡಳಿತ ಮಂತ್ರವನ್ನು ಹೊಂದಿರುವ ಬಿಜೆಪಿಯು ಹಿಂದೂ ಧರ್ಮದ ಹೆಸರನ್ನು ಮತ್ತದರ ಹೆಸರಲ್ಲಿ ಹಿಂಸೆಯನ್ನು ತನ್ನ ಅಸ್ತ್ರಗಳಾಗಿ ಬಳಸಿಕೊಳ್ಳುತ್ತದೆ ಮತ್ತು ಅದಕ್ಕಾಗಿ ಸಮಾಜದ ಕೆಳವರ್ಗಗಳ ಜನರನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ.

ಭಾರತದಲ್ಲಿ ಧರ್ಮಗಳು ಮತ್ತು ಜಾತಿಗಳು:

ಅದಾಗಲೇ ಹೇಳಿರುವಂತೆ, ಆಫ್ರಿಕಾದಿಂದ ಭರತ ಖಂಡವನ್ನು ತಲುಪಿದ ಮೊದಲ ಮನುಷ್ಯರು ಇಲ್ಲಿನ ಸಮೃದ್ಧ ಕಾಡುಗಳಲ್ಲಿ, ಗುಹೆಗಳಲ್ಲಿ ಸಾವಿರಾರು ವರ್ಷಗಳ ಕಾಲ ವಾಸವಾಗಿದ್ದು ಭಾರತದ ಆದಿವಾಸಿಗಳಾದರು. ಯುರೇಷಿಯಾದಲ್ಲಿ ಕೃಷಿ ಹಾಗೂ ಪಶುಸಾಕಣೆಯನ್ನು ಜೀವನವಿಧಾನವಾಗಿ ಅಳವಡಿಸಿಕೊಂಡಿದ್ದ ಜನಾಂಗದವರು ತಮ್ಮ ರಾಜ್ಯವಿಸ್ತರಣೆಯ ಅಂಗವಾಗಿ ಸುಮಾರು ಎಂಟು ಸಾವಿರ ವರ್ಷಗಳ ಹಿಂದೆ ಭರತ ಖಂಡಕ್ಕೂ ಕಾಲಿಟ್ಟರು, ಇಲ್ಲಿನ ಆದಿವಾಸಿಗಳನ್ನು ಎದುರಿಸಿದರು. ಆದಿವಾಸಿಗಳಲ್ಲಿ ಕೆಲವರು ಶರಣಾಗಿ ಅವರ ಅಡಿಯಾಳಾಗಿ ದುಡಿಯತೊಡಗಿದರು; ಇನ್ನು ಕೆಲವು ದಿಟ್ಟರು ಈ ದಾಳಿಗಳನ್ನೆದುರಿಸಿ ಈ ಹೊಸ ವ್ಯವಸ್ಥೆಯಿಂದ ಹೊರಗಿಡಲ್ಪಟ್ಟು ದಾನವರೋ, ಅಸ್ಪ್ರಶ್ಯರೋ ಆಗಿಬಿಟ್ಟರು.

ಭಾರತದ ಆದಿವಾಸಿ

ಹೊರಗಿನಿಂದ ಬಂದವರು ಇಲ್ಲಿನವರ ಕೆಲವು ಜೀವನಕ್ರಮಗಳನ್ನು ಅಳವಡಿಸಿಕೊಂಡರೆ, ಅವರೊಂದಿಗೆ ಸೇರಿಕೊಂಡ ಇಲ್ಲಿನವರು ದಾಳಿಗಾರರ ಸಾಮಾಜಿಕ ವ್ಯವಸ್ಥೆಯ ಭಾಗವಾಗಿಬಿಟ್ಟರು. ‘ತಲೆಯಿದ್ದ’ ಬ್ರಾಹ್ಮಣರು, ಭುಜಬಲದಲ್ಲಿ ಆಳುವ ಕ್ಷತ್ರಿಯರು, ತೊಡೆಯಲ್ಲಿ ತಿಜೋರಿಯಿಟ್ಟ ವೈಶ್ಯರು ಜೊತೆ ಸೇರಿ ಆಡಳಿತವನ್ನೂ, ಸಂಪತ್ತನ್ನೂ ತಮ್ಮೊಳಗಿಟ್ಟುಕೊಂಡರೆ, ಅವರಿಗಾಗಿ ದುಡಿಯುತ್ತಿದ್ದವರು ಶೂದ್ರರಾಗಿ ಪಾದ ಸೇರಿದರು. ಕರ್ಮವಷ್ಟೇ ನಿನ್ನ ಧರ್ಮ, ಅದಕ್ಕೆ ಫಲಾಪೇಕ್ಷೆಯನ್ನು ಮಾಡಕೂಡದು, ಅದೇನಿದ್ದರೂ ಮೇಲಿನವರಿಗೆ ಬಿಟ್ಟದ್ದೆನ್ನುವ ಬೋಧೆಯು ಧರ್ಮದ ಭಾಗವೇ ಆಗಿಬಿಟ್ಟಿತು. ರಾಜರುಗಳ ನೆರವಿನಿಂದ ಬೃಹತ್ ದೇವಾಲಯಗಳು ಕಟ್ಟಲ್ಪಟ್ಟು ಪುರೋಹಿತರು ಗರ್ಭಗುಡಿಯೊಳಗೆ ಅಡಗಿಸಲ್ಪಟ್ಟ ದೇವರಿಗೆ ಹತ್ತಿರವಾಗಿ, ದುಡಿಯುವವರು ದೂರವಿಡಲ್ಪಟ್ಟರು. ಈ ಪರಿಸ್ಥಿತಿ ಇಂದಿಗೂ ಹಾಗೆಯೇ ಮುಂದುವರಿದಿದೆಯೆನ್ನಬಹುದು.

ಹೀಗೆ ರೂಪುಗೊಂಡ ಭಾರತದ ಮೊದಲ ನಾಗರಿಕತೆಯಲ್ಲಿ ಬೇರೂರಿದ್ದ ಹಿಂಸೆ, ಅನ್ಯಾಯ ಹಾಗೂ ಅಸಮಾನತೆಗಳಿಂದ ಬೇಸತ್ತ ಕೆಲವರಿಂದ ಅನ್ಯ ಮಾರ್ಗಗಳ ಅನ್ವೇಷಣೆಯೂ ನಡೆಯಿತು. ಚಾರ್ವಾಕರ ಲೋಕಾಯತ ದರ್ಶನ, ಬೌದ್ಧ, ಜೈನ ಧರ್ಮಾದಿಗಳು ಹುಟ್ಟಿದವು. ಬಸವಣ್ಣ, ನಾನಕ, ನಾರಾಯಣ ಗುರು ಮುಂತಾದ ಹಲವರು ಕೂಡಾ ಬೇರೆ ದಾರಿ ತೋರಿದರು. ಅಶೋಕನ ಕಾಲದಲ್ಲಿ ಬೌದ್ಧ ಧರ್ಮವು ತನ್ನ ಉಚ್ಛ್ರಾಯವನ್ನು ತಲುಪಿತಾದರೂ ನಂತರದ ವರ್ಷಗಳಲ್ಲಿ ಬ್ರಾಹ್ಮಣ್ಯದ ಸಮರ್ಥಕರಾದ ಕೆಲವು ರಾಜರುಗಳ ಅವ್ಯಾಹತ ದಾಳಿಗಳಿಂದಾಗಿ ಈ ಎಲ್ಲ ಬದಲಿ ದಾರಿಗಳೂ ತಮ್ಮ ಅವನತಿಯನ್ನು ಕಂಡವು ಅಥವಾ ಇವೆಲ್ಲಾ ಹಿಂದೂ ಧರ್ಮದ ಭಾಗಗಳೇ ಎನ್ನುವಂತೆ ಬಿಂಬಿಸಲ್ಪಟ್ಟವು.

ಗ್ರೀಕರು, ಇಸ್ಲಾಂ ಧರ್ಮಾನುಯಾಯಿಗಳಾಗಿದ್ದ ಪರ್ಷಿಯನರು/ತುರ್ಕರು, ಕ್ರಿಶ್ಚಿಯನ್ ಧರ್ಮಾನುಯಾಯಿಗಳಾಗಿದ್ದ ಯುರೋಪಿನ ಸಾಮ್ರಾಜ್ಯಶಾಹಿಗಳೆಲ್ಲರೂ ಕಾಲಕ್ರಮೇಣ ಭಾರತಕ್ಕೆ ದಾಳಿಯಿಟ್ಟರು; ಇಲ್ಲಿನ ಸಂಪತ್ತನ್ನು ದೋಚಿದರು. ಆಯಾ ಕಾಲದಲ್ಲಿ ಇಲ್ಲಿದ್ದ ಆಳುವ ವರ್ಗಗಳವರು ದಾಳಿಕೋರರೊಂದಿಗೆ ಸೆಣಸಿದರು, ಸೋತರು, ಶರಣಾಗತರಾದರು. ತಮ್ಮ ಅಧಿಕಾರವನ್ನು ಉಳಿಸಿಕೊಳ್ಳಬಯಸಿದ ಬಹಳಷ್ಟು ರಾಜರುಗಳು ಹೊರಗಿನಿಂದ ಬಂದವರೊಂದಿಗೆ ಸೇರಿಕೊಂಡು ವೈವಾಹಿಕ ಸಂಬಂಧಗಳನ್ನೂ ಏರ್ಪಡಿಸಿಕೊಂಡರು, ಹೀಗೆ ನಿಧಾನಕ್ಕೆ ಇನ್ನಿತರ ಧರ್ಮಗಳೂ ಇಲ್ಲಿ ಕಾಲೂರಲು ಸಾಧ್ಯವಾಯಿತು. ಈ ಎಲ್ಲವುಗಳ ಮಧ್ಯೆ, ಇಲ್ಲಿದ್ದ ಆದಿವಾಸಿಗಳು ಇನ್ನಷ್ಟು ದಾಳಿಗಳಿಗೊಳಗಾದರು, ಮೂಲೆಗುಂಪಾದರು. ವಿಶೇಷವೆಂದರೆ ಜಗತ್ತಿನ ಬಹುಭಾಗಗಳಲ್ಲಿ ಆದಿವಾಸಿಗಳ ದುರ್ಗತಿಯು ಇದೇ ಆಗಿರುವುದನ್ನು ಕಾಣಬಹುದು. ಅಮೆರಿಕಾದ ರೆಡ್ ಇಂಡಿಯನರು, ಆಸ್ಟ್ರೇಲಿಯಾದ ಮೂಲ ನಿವಾಸಿಗಳು, ಆಫ್ರಿಕಾದ ಮೂಲ ಜನಾಂಗಗಳೆಲ್ಲರೂ ಇಂದಿಗೂ ನಾಗರಿಕತೆಯ ಹೊರವ್ಯಾಪ್ತಿಗಳಲ್ಲಿಯೇ ಬಾಳುತ್ತಿರುವುದನ್ನು ನಾವು ಕಾಣುತ್ತೇವೆ. ಮನುಕುಲದ ತೊಟ್ಟಿಲಾದ ಆಫ್ರಿಕಾದಲ್ಲಿ ಬಡತನ ಹಾಗೂ ಅನಾರೋಗ್ಯಗಳು ತಾಂಡವವಾಡುತ್ತಿದ್ದು ದೈತ್ಯ ರಾಷ್ಟ್ರಗಳ ಕಪಿಮುಷ್ಠಿಯಲ್ಲಿ ಸಿಲುಕಿ ನರಳುತ್ತಿವೆ.

ಸಾಮಾಜಿಕ ನ್ಯಾಯ ಹೇಗೆ?

ಹೀಗೆ ಮನುಕುಲದ ಚರಿತ್ರೆಯನ್ನು ವೈಜ್ಞಾನಿಕವಾಗಿ ಅವಲೋಕಿಸಿದರೆ, ಮನುಕುಲವೆಲ್ಲವೂ ಒಂದೇ ಎನ್ನುವುದೂ, ಧರ್ಮ ಹಾಗೂ ಜಾತಿಗಳ ಹೆಸರಲ್ಲಿ ನಾವಿಂದು ಕಾಣುತ್ತಿರುವ ಶ್ರೇಣೀಕೃತ ವ್ಯವಸ್ಥೆಯು ಉಳ್ಳವರು ಇಲ್ಲದವರನ್ನು ಶೋಷಿಸಲು ಮಾಡಿಕೊಂಡಿರುವ ಏರ್ಪಾಡೆನ್ನುವುದೂ ಸ್ಪಷ್ಟವಾಗುತ್ತದೆ. ಆದ್ದರಿಂದ ನಿಜಾರ್ಥದಲ್ಲಿ ಸಾಮಾಜಿಕ ನ್ಯಾಯವು ದೊರೆಯಬೇಕಾದರೆ ಈ ಶ್ರೇಣೀಕೃತ ವ್ಯವಸ್ಥೆಯನ್ನು ಕಿತ್ತೊಗೆದು ಎಲ್ಲ ಮನುಷ್ಯರಿಗೂ ಸಮಾನ ಅವಕಾಶಗಳಿರುವ ಸಾಮಾಜಿಕ ವ್ಯವಸ್ಥೆಯನ್ನು ಮತ್ತೆ ಕಟ್ಟುವುದೊಂದೇ ದಾರಿಯಾಗಿದೆ. ದೇವರು, ಧರ್ಮ, ಜಾತಿ ಮತ್ತಿತರ ಕೃತಕವಾದ, ಮಾನವ ನಿರ್ಮಿತ ವರ್ಗೀಕರಣಗಳ ಹಂಗಿಲ್ಲದ ಸಶಕ್ತ ಸಮಾಜದ ನಿರ್ಮಾಣವೇ ನಮ್ಮ ಗುರಿಯಾಗಿರಬೇಕು. ಅಲ್ಲಿಯವರೆಗೆ, ಈಗಿರುವ ವ್ಯವಸ್ಥೆಯ ನಿಜ ಸಂಗತಿಗಳನ್ನು ಅರ್ಥೈಸಿಕೊಂಡು ಅದರಲ್ಲಾಗುತ್ತಿರುವ ಶೋಷಣೆಯನ್ನು ಎಲ್ಲರೊಂದಾಗಿ ಎದುರಿಸಬೇಕಾದದ್ದು ಇಂದಿನ ತುರ್ತು ಅಗತ್ಯವಾಗಿದೆ. ಸಂವಿಧಾನದ, ಪ್ರಜಾಪ್ರಭುತ್ವದ ಚೌಕಟ್ಟಿನೊಳಗೆ ಈ ಅಸಮಾನತೆಯ ವಿರುದ್ಧ ಹೋರಾಡುತ್ತಾ, ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಹಿಂಸೆಯನ್ನೂ, ಅದನ್ನು ಸಮರ್ಥಿಸಲು ಹೇಳಲಾಗುತ್ತಿರುವ ಸುಳ್ಳುಗಳನ್ನೂ ಎದುರಿಸಬೇಕಾದದ್ದು ನಮ್ಮೆಲ್ಲರ ಕರ್ತವ್ಯವಾಗಿದೆ. ನಮ್ಮ ಸಮಾಜದಲ್ಲಿರುವ ಅವಕಾಶವಂಚಿತರು, ದುರ್ಬಲರು, ದಲಿತರೆಂದು ಕರೆಸಿಕೊಳ್ಳುತ್ತಿರುವ ಇಲ್ಲಿನ ಮೂಲನಿವಾಸಿಗಳು, ದುಡಿಯುವ ಜನರು ಮತ್ತಿತರ ಎಲ್ಲಾ ಶೋಷಿತ ವರ್ಗಗಳ ಜನರು ಒಂದಾಗಿ ತಮ್ಮ ಬದುಕುವ, ಶಿಕ್ಷಣ ಪಡೆಯುವ ಹಾಗೂ ಆರೋಗ್ಯವನ್ನು ಪಡೆಯುವ ಹಕ್ಕುಗಳಿಗಾಗಿ ಹೋರಾಡಬೇಕಾಗಿದೆ.

Advertisements

Tags: , , , , , ,

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s


%d bloggers like this: