ಧರ್ಮಾಂಧರನ್ನು ಧಿಕ್ಕರಿಸೋಣ!

ಮನುಕುಲವಿಂದು ಕವಲುದಾರಿಯಲ್ಲಿದೆ. ಅತ್ಯದ್ಭುತವಾದ ವೈಜ್ಞಾನಿಕ ಸಂಶೋಧನೆಗಳೂ, ತಂತ್ರಜ್ಞಾನದಲ್ಲಾಗುತ್ತಿರುವ ಪ್ರಗತಿಗಳೂ ಮಾನವನ ಜೀವನವನ್ನು ಹಸನುಗೊಳಿಸುವಲ್ಲಿ ನೆರವಾಗುತ್ತಿರುವ ಕಾಲದಲ್ಲಿಯೇ, ಮನುಕುಲವನ್ನು ದಾಸ್ಯದ ಅಂಧಕಾರದತ್ತ ತಳ್ಳುವ ಹುನ್ನಾರವು ಕೂಡಾ ನಡೆಯುತ್ತಿರುವುದು ವಿಪರ್ಯಾಸವೇ ಸರಿ. ಇಂತಹ ಸನ್ನಿವೇಶದಲ್ಲಿ ಜನಸಾಮಾನ್ಯರು, ಅದರಲ್ಲೂ ಯುವಜನರು, ತಮ್ಮ ಭವಿಷ್ಯದ ಒಳಿತಿಗಾಗಿ ಪ್ರಗತಿಪರವಾದ ಪಥವನ್ನು ಹಿಡಿದು ಮುನ್ನಡೆಯಬೇಕಾದ ಅಗತ್ಯವು ಇಂದು ಹಿಂದೆಂದಿಗಿಂತಲೂ ಹೆಚ್ಚಾಗಿ ಕಂಡುಬರುತ್ತಿದೆ.

ತನ್ನ ಸಹಜ ಬುದ್ಧಿಮತ್ತೆಯ ಬಲದಿಂದ ನಿಸರ್ಗದ ರಹಸ್ಯಗಳನ್ನು ಬೇಧಿಸುತ್ತಾ ಸದಾ ಸತ್ಯದ ಅನ್ವೇಷಣೆಯಲ್ಲಿರುವ ಮಾನವನ ಸಾಧನೆಗಳು ಅಪಾರ. ಬ್ರಹ್ಮಾಂಡದ ಉಗಮ, ಜೀವಜಾತಿಗಳ ವಿಕಾಸ ಇವೇ ಮುಂತಾದ ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕುತ್ತಾ, ಇಡೀ ಬ್ರಹ್ಮಾಂಡವು ಕಣಗಳಿಂದ ರೂಪುಗೊಂಡಿರುವುದನ್ನೂ, ಮಾನವರೂ ಸೇರಿದಂತೆ ಸಕಲ ಜೀವರಾಶಿಯೂ ಇವೇ ಕಣಗಳಿಂದ ಮಾಡಲ್ಪಟ್ಟು ಬ್ರಹ್ಮಾಂಡದ ಅವಿಭಾಜ್ಯ ಅಂಗಗಳೆಂಬುದನ್ನೂ ನಾವಿಂದು ಗುರುತಿಸಿದ್ದೇವೆ. ಮಾನವನ ಇಡೀ ಜೀವ ತಳಿಗಳನ್ನು ಅಧ್ಯಯನ ಮಾಡಲಾಗಿದ್ದು, ಮಾನವರೆಲ್ಲರೂ ಒಂದೇ ಎಂಬ ವಿಶ್ವ ಕುಟುಂಬದ ಸತ್ಯವೀಗ ಶತಸ್ಸಿದ್ಧಗೊಂಡಿದೆ. ದೇವರು, ಜಾತಿ, ಧರ್ಮ ಇತ್ಯಾದಿಗಳೆಲ್ಲಾ ಮಾನವನ ಕಲ್ಪನೆಯ ಭಾಗಗಳಷ್ಟೇ ಆಗಿದ್ದು, ಅವುಗಳ ಹೆಸರಿನಲ್ಲಿ ಬಹುತೇಕರು ಶೋಷಣೆಗೊಳಗಾಗುತ್ತಿರುವ ಕಟು ಸತ್ಯವೂ ನಮ್ಮ ಮುಂದಿದೆ. ನಮ್ಮ ಅಗಾಧವಾದ ಜ್ಞಾನಭಂಡಾರವು ಇಂದು ಅಂತರ್ಜಾಲದ ಮೂಲಕ ಪ್ರತಿಯೋರ್ವನ ಬೆರಳ ತುದಿಗಳನ್ನು ತಲುಪುವಂತಾಗಿದೆ.

ಇನ್ನೊಂದೆಡೆ, ಜನಸಾಮಾನ್ಯರನ್ನು ಈ ಎಲ್ಲ ಬೆಳವಣಿಗೆಗಳ ಪ್ರಯೋಜನಗಳಿಂದ ದೂರವಿರಿಸಿ, ಅವರನ್ನು ಅವಕಾಶ ವಂಚಿತರನ್ನಾಗಿಸಿ, ಅಂಧಕಾರದಲ್ಲಿರಿಸಿ ದಾಸ್ಯದತ್ತ ತಳ್ಳುವ ಕುಟಿಲ ಪ್ರಯತ್ನಗಳು ಮುಂದುವರಿಯುತ್ತಿವೆ, ಮಾತ್ರವಲ್ಲ, ಇತ್ತೀಚಿನ ವರ್ಷಗಳಲ್ಲಿ ಬಲಗೊಳ್ಳುತ್ತಿವೆ. ಅಮೆರಿಕ, ಮಧ್ಯ ಪ್ರಾಚ್ಯ ಹಾಗೂ ಭಾರತವೂ ಸೇರಿದಂತೆ ಏಷಿಯಾದ ಹಲವು ರಾಷ್ಟ್ರಗಳಲ್ಲಿ ದೇವರು-ಧರ್ಮಗಳ ಹೆಸರಲ್ಲಿ ರಾಜಕೀಯವನ್ನು ನಡೆಸುವ ಹಲವು ಪಕ್ಷಗಳಿದ್ದು, ಧರ್ಮ-ದೇವರುಗಳ ಹೆಸರಲ್ಲಿ ಜನರನ್ನು ಮರುಳುಗೊಳಿಸಿ, ಅವರ ದಿನನಿತ್ಯದ ಸಮಸ್ಯೆಗಳಿಂದ ವಿಮುಖರನ್ನಾಗಿಸಿ ಶೋಷಿಸುವುದೇ ಅವುಗಳ ಮುಖ್ಯವಾದ ಉದ್ದೇಶವಾಗಿರುತ್ತದೆ. ಜನಸಾಮಾನ್ಯರ ಬದುಕುವ ಹಕ್ಕನ್ನೂ, ಬಡಬಗ್ಗರ ಭೂಮಿಯನ್ನೂ ಅಪಹರಿಸಿ ಅಭಿವೃದ್ಧಿಯ ಹೆಸರಲ್ಲಿ ಸಮಾಜದ ಮೇಲೆ ಧನವಂತರ ಕಪಿಮುಷ್ಟಿಯನ್ನು ಬಲಪಡಿಸಲು ಈ ಪಕ್ಷಗಳು ನೆರವಾಗುತ್ತವೆ. ಹಿಂದುತ್ವದ ಹೆಸರಲ್ಲಿ, ದೇವರುಗಳ ಹೆಸರಲ್ಲಿ ರಾಜಕೀಯ ನಡೆಸುತ್ತಿರುವ ಸಂಘ ಪರಿವಾರದ ಅಂತಿಮ ಉದ್ದೇಶವು ದೇಶದಲ್ಲಿ ಬಹುಮತೀಯ ಕೋಮಿನ ಹೆಸರಲ್ಲಿ ಧನವಂತರ ಸರ್ವಾಧಿಕಾರವನ್ನು ಸ್ಥಾಪಿಸುವುದೇ ಆಗಿದೆ. ಆದ್ದರಿಂದ ಅಮಾಯಕರಾದ ಜನರನ್ನು ದೇವರು-ಧರ್ಮಗಳ ಹೆಸರಲ್ಲಿ ಎತ್ತಿ ಕಟ್ಟಿ, ವಿಭಜಿಸಿ, ತಮ್ಮ ಬೇಳೆ ಬೇಯಿಸಿಕೊಳ್ಳಲೆಳಸುವ ಇಂತಹಾ ಪ್ರತಿಗಾಮೀ ಫ್ಯಾಸಿಸ್ಟ್ ಶಕ್ತಿಗಳ ನಿಜಬಣ್ಣವನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕಾದುದು ಇಂದಿನ ತುರ್ತು ಅಗತ್ಯವಾಗಿದೆ.

ನಾವೆಲ್ಲರೂ ಮನುಜರು, ನಮ್ಮದೆಲ್ಲರದೂ ಒಂದೇ ಜಾತಿ, ಒಂದೇ ಕುಲ, ನಾವೆಲ್ಲರೂ ದುಡಿಯುವ ಜನ ಎನ್ನುವುದಷ್ಟೇ ಸತ್ಯವಾಗಿದೆ. ದುಡಿಯುವ ಜನರ ಸಮಸ್ಯೆಗಳೂ ಒಂದೇ ಆಗಿರುತ್ತವೆ ಮತ್ತು ಅವುಗಳಿಗೆ ದೇವರು-ಧರ್ಮಗಳ ಆಧಾರದಲ್ಲಿ ಯಾವುದೇ ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಕೋಟಿಗಟ್ಟಲೆಯಲ್ಲಿರುವ ನಮ್ಮನ್ನು, ದುಡಿಯುವ ಜನರನ್ನು, ಬೆರಳೆಣಿಕೆಯಷ್ಟಿರುವ ಧರ್ಮಾಂಧರು ಶೋಷಿಸುವುದಕ್ಕೆ, ದಾರಿ ತಪ್ಪಿಸುವುದಕ್ಕೆ ನಾವು ಅವಕಾಶವನ್ನು ನೀಡಬಾರದು. ಮನುಕುಲದ ಪ್ರಗತಿಯ ಎಲ್ಲಾ ಫಲಗಳು ಜಾತಿ-ಮತಗಳ ಬೇಧವಿಲ್ಲದೆ ಸರ್ವರಿಗೂ ಸಿಗುವಂತಾಗುವುದಕ್ಕೆ ನಾವು ಶ್ರಮಿಸಬೇಕು. ಊಟ, ವಸತಿ, ಆರೋಗ್ಯ, ಶಿಕ್ಷಣ ಇವೇ ಮುಂತಾದ ನಮ್ಮ ದಿನನಿತ್ಯದ ಅಗತ್ಯಗಳನ್ನು ಪೂರೈಸುವಲ್ಲಿ ಯಾವ ನೆರವನ್ನೂ ನೀಡಲಾಗದ ಮತ-ಧರ್ಮಗಳನ್ನು ಸಾರ್ವಜನಿಕ ಜೀವನದಿಂದ ಪ್ರತ್ಯೇಕಿಸಿ, ದುಡಿಯುವ ಜನರೆಲ್ಲರೂ ಒಂದಾಗಿ ತಮ್ಮ ಹಕ್ಕು ಹಾಗೂ ಸ್ವಾತಂತ್ರ್ಯಗಳ ರಕ್ಷಣೆಗಾಗಿ ಹೋರಾಡಬೇಕಾಗಿದೆ.

ಬನ್ನಿ, ಈ ಮಹತ್ಕಾರ್ಯದಲ್ಲಿ ಕೈಜೋಡಿಸೋಣ! ಮನುಕುಲವನ್ನು ಒಡೆದು ನೆತ್ತರ ಕೋಡಿಯನ್ನು ಹರಿಸುತ್ತಿರುವ ಬೆರಳೆಣಿಕೆಯ ಮತಾಂಧ ಶಕ್ತಿಗಳನ್ನು ಧಿಕ್ಕರಿಸೋಣ, ಬಹಿಷ್ಕರಿಸೋಣ!!

ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಯಾರೇ ಇರಲಿ – ಕುಡಿಯುವ ನೀರು, ತಿನ್ನುವ ಆಹಾರ, ವಾಸಿಸುವ ಮನೆ,  ಸಾಗುವ ದಾರಿ ಒಂದೇ ಅಲ್ಲವೆ? ಮತ-ಧರ್ಮಗಳೆಲ್ಲ ಮನೆಯಲ್ಲಿರಲಿ, ಪ್ರೀತಿ-ಭ್ರಾತೃತ್ವ ಹೊರಹೊಮ್ಮಲಿ!!

Advertisements

Tags: , , ,

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s


%d bloggers like this: