Archive for September, 2008

ವ್ಯತ್ಯಾಸ ಗುರುತಿಸಿ

September 26, 2008

ಇವು ಆಗಸ್ಟ್ 1, 2008ರಂದು ಗೌತಮಿ ಎಕ್ಸ್ ಪ್ರೆಸ್ ರೈಲಿನಲ್ಲಾದ ದುರ್ಘಟನೆಯ ಚಿತ್ರಗಳು. ಸೆಕಂದರಾಬಾದ್ ನಿಂದ ಕಾಕಿನಾಡಕ್ಕೆ ಪ್ರಯಾಣಿಸುತ್ತಿದ್ದ ರೈಲಿನ ಐದು ಬೋಗಿಗಳಲ್ಲಿ ಬೆಂಕಿಯುಂಟಾದ್ದರಿಂದ 32 ಜನ ಸತ್ತು ಐವರು ಗಾಯಗೊಂಡರು. ವಿದ್ಯುತ್ ಶಾರ್ಟ್ ಸರ್ಕಿಟ್ ಈ ದುರಂತಕ್ಕೆ ಕಾರಣವೆಂದು ಹೇಳಲಾಗಿದೆ.

Sabaramati Express Burning

Sabaramati Express Burning

ಇದು 2002 ರ ಫೆಬ್ರವರಿ 27ರಂದು ಗೋಧ್ರಾದಲ್ಲಿ ಸಾಬರಮತಿ ಎಕ್ಸ್ ಪ್ರೆಸ್ ರೈಲಿನಲ್ಲಿ ಉಂಟಾದ ದುರಂತದ ಚಿತ್ರ. ಅಯೋಧ್ಯೆಯಿಂದ ಮರಳುತ್ತಿದ್ದ 59 ಸ್ವಯಂಸೇವಕರು ಈ ದುರಂತದಲ್ಲಿ ಮಡಿದರು. [ಇನ್ನೊಂದು ವರದಿ ಇಲ್ಲಿದೆ]

ನಾನಾವತಿ ಸಮಿತಿಯ ವರದಿಯಂತೆ, ಕೆಲವರು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದೇ ಈ ದುರಂತಕ್ಕೆ ಕಾರಣ.  ಆದರೆ, ಯು.ಸಿ. ಬ್ಯಾನರ್ಜಿ ಸಮಿತಿಯ ಪ್ರಕಾರ, ಇದೊದು ಅವಘಡವೇ ಆಗಿತ್ತು ಹೊರತು ಅದರಲ್ಲಿ ಷಡ್ಯಂತ್ರವೇನಿರಲಿಲ್ಲ. [ಮೇಲ್ಕಾಣಿಸಿದ ಗೌತಮಿ ರೈಲಿನ ದುರಂತದಂತೆಯೇ]

ಗೌತಮಿ ಎಕ್ಸ್ ಪ್ರೆಸ್ ನೊಳಗಿಂದ ಬೆಂಕಿ ಉರಿಯುತ್ತಿರುವುದನ್ನು ನೋಡಿ. ಈಗ, ಹೊರಗಿನಿಂದ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಯಿತೆಂದು ಹೇಳಲಾಗುತ್ತಿರುವ ಸಾಬರಮತಿ ರೈಲಿನ ಬೆಂಕಿಯನ್ನು ನೋಡಿ. ನಂತರ ಗುಜರಾತದ ವಿಧಿವಿಜ್ಞಾನ ಪ್ರಯೋಗಾಲಯದ ವರದಿಯನ್ನು ಓದಿ.

Advertisements

ಧರ್ಮಾಂಧರನ್ನು ಧಿಕ್ಕರಿಸೋಣ!

September 25, 2008

ಮನುಕುಲವಿಂದು ಕವಲುದಾರಿಯಲ್ಲಿದೆ. ಅತ್ಯದ್ಭುತವಾದ ವೈಜ್ಞಾನಿಕ ಸಂಶೋಧನೆಗಳೂ, ತಂತ್ರಜ್ಞಾನದಲ್ಲಾಗುತ್ತಿರುವ ಪ್ರಗತಿಗಳೂ ಮಾನವನ ಜೀವನವನ್ನು ಹಸನುಗೊಳಿಸುವಲ್ಲಿ ನೆರವಾಗುತ್ತಿರುವ ಕಾಲದಲ್ಲಿಯೇ, ಮನುಕುಲವನ್ನು ದಾಸ್ಯದ ಅಂಧಕಾರದತ್ತ ತಳ್ಳುವ ಹುನ್ನಾರವು ಕೂಡಾ ನಡೆಯುತ್ತಿರುವುದು ವಿಪರ್ಯಾಸವೇ ಸರಿ. ಇಂತಹ ಸನ್ನಿವೇಶದಲ್ಲಿ ಜನಸಾಮಾನ್ಯರು, ಅದರಲ್ಲೂ ಯುವಜನರು, ತಮ್ಮ ಭವಿಷ್ಯದ ಒಳಿತಿಗಾಗಿ ಪ್ರಗತಿಪರವಾದ ಪಥವನ್ನು ಹಿಡಿದು ಮುನ್ನಡೆಯಬೇಕಾದ ಅಗತ್ಯವು ಇಂದು ಹಿಂದೆಂದಿಗಿಂತಲೂ ಹೆಚ್ಚಾಗಿ ಕಂಡುಬರುತ್ತಿದೆ.

ತನ್ನ ಸಹಜ ಬುದ್ಧಿಮತ್ತೆಯ ಬಲದಿಂದ ನಿಸರ್ಗದ ರಹಸ್ಯಗಳನ್ನು ಬೇಧಿಸುತ್ತಾ ಸದಾ ಸತ್ಯದ ಅನ್ವೇಷಣೆಯಲ್ಲಿರುವ ಮಾನವನ ಸಾಧನೆಗಳು ಅಪಾರ. ಬ್ರಹ್ಮಾಂಡದ ಉಗಮ, ಜೀವಜಾತಿಗಳ ವಿಕಾಸ ಇವೇ ಮುಂತಾದ ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕುತ್ತಾ, ಇಡೀ ಬ್ರಹ್ಮಾಂಡವು ಕಣಗಳಿಂದ ರೂಪುಗೊಂಡಿರುವುದನ್ನೂ, ಮಾನವರೂ ಸೇರಿದಂತೆ ಸಕಲ ಜೀವರಾಶಿಯೂ ಇವೇ ಕಣಗಳಿಂದ ಮಾಡಲ್ಪಟ್ಟು ಬ್ರಹ್ಮಾಂಡದ ಅವಿಭಾಜ್ಯ ಅಂಗಗಳೆಂಬುದನ್ನೂ ನಾವಿಂದು ಗುರುತಿಸಿದ್ದೇವೆ. ಮಾನವನ ಇಡೀ ಜೀವ ತಳಿಗಳನ್ನು ಅಧ್ಯಯನ ಮಾಡಲಾಗಿದ್ದು, ಮಾನವರೆಲ್ಲರೂ ಒಂದೇ ಎಂಬ ವಿಶ್ವ ಕುಟುಂಬದ ಸತ್ಯವೀಗ ಶತಸ್ಸಿದ್ಧಗೊಂಡಿದೆ. ದೇವರು, ಜಾತಿ, ಧರ್ಮ ಇತ್ಯಾದಿಗಳೆಲ್ಲಾ ಮಾನವನ ಕಲ್ಪನೆಯ ಭಾಗಗಳಷ್ಟೇ ಆಗಿದ್ದು, ಅವುಗಳ ಹೆಸರಿನಲ್ಲಿ ಬಹುತೇಕರು ಶೋಷಣೆಗೊಳಗಾಗುತ್ತಿರುವ ಕಟು ಸತ್ಯವೂ ನಮ್ಮ ಮುಂದಿದೆ. ನಮ್ಮ ಅಗಾಧವಾದ ಜ್ಞಾನಭಂಡಾರವು ಇಂದು ಅಂತರ್ಜಾಲದ ಮೂಲಕ ಪ್ರತಿಯೋರ್ವನ ಬೆರಳ ತುದಿಗಳನ್ನು ತಲುಪುವಂತಾಗಿದೆ.

ಇನ್ನೊಂದೆಡೆ, ಜನಸಾಮಾನ್ಯರನ್ನು ಈ ಎಲ್ಲ ಬೆಳವಣಿಗೆಗಳ ಪ್ರಯೋಜನಗಳಿಂದ ದೂರವಿರಿಸಿ, ಅವರನ್ನು ಅವಕಾಶ ವಂಚಿತರನ್ನಾಗಿಸಿ, ಅಂಧಕಾರದಲ್ಲಿರಿಸಿ ದಾಸ್ಯದತ್ತ ತಳ್ಳುವ ಕುಟಿಲ ಪ್ರಯತ್ನಗಳು ಮುಂದುವರಿಯುತ್ತಿವೆ, ಮಾತ್ರವಲ್ಲ, ಇತ್ತೀಚಿನ ವರ್ಷಗಳಲ್ಲಿ ಬಲಗೊಳ್ಳುತ್ತಿವೆ. ಅಮೆರಿಕ, ಮಧ್ಯ ಪ್ರಾಚ್ಯ ಹಾಗೂ ಭಾರತವೂ ಸೇರಿದಂತೆ ಏಷಿಯಾದ ಹಲವು ರಾಷ್ಟ್ರಗಳಲ್ಲಿ ದೇವರು-ಧರ್ಮಗಳ ಹೆಸರಲ್ಲಿ ರಾಜಕೀಯವನ್ನು ನಡೆಸುವ ಹಲವು ಪಕ್ಷಗಳಿದ್ದು, ಧರ್ಮ-ದೇವರುಗಳ ಹೆಸರಲ್ಲಿ ಜನರನ್ನು ಮರುಳುಗೊಳಿಸಿ, ಅವರ ದಿನನಿತ್ಯದ ಸಮಸ್ಯೆಗಳಿಂದ ವಿಮುಖರನ್ನಾಗಿಸಿ ಶೋಷಿಸುವುದೇ ಅವುಗಳ ಮುಖ್ಯವಾದ ಉದ್ದೇಶವಾಗಿರುತ್ತದೆ. ಜನಸಾಮಾನ್ಯರ ಬದುಕುವ ಹಕ್ಕನ್ನೂ, ಬಡಬಗ್ಗರ ಭೂಮಿಯನ್ನೂ ಅಪಹರಿಸಿ ಅಭಿವೃದ್ಧಿಯ ಹೆಸರಲ್ಲಿ ಸಮಾಜದ ಮೇಲೆ ಧನವಂತರ ಕಪಿಮುಷ್ಟಿಯನ್ನು ಬಲಪಡಿಸಲು ಈ ಪಕ್ಷಗಳು ನೆರವಾಗುತ್ತವೆ. ಹಿಂದುತ್ವದ ಹೆಸರಲ್ಲಿ, ದೇವರುಗಳ ಹೆಸರಲ್ಲಿ ರಾಜಕೀಯ ನಡೆಸುತ್ತಿರುವ ಸಂಘ ಪರಿವಾರದ ಅಂತಿಮ ಉದ್ದೇಶವು ದೇಶದಲ್ಲಿ ಬಹುಮತೀಯ ಕೋಮಿನ ಹೆಸರಲ್ಲಿ ಧನವಂತರ ಸರ್ವಾಧಿಕಾರವನ್ನು ಸ್ಥಾಪಿಸುವುದೇ ಆಗಿದೆ. ಆದ್ದರಿಂದ ಅಮಾಯಕರಾದ ಜನರನ್ನು ದೇವರು-ಧರ್ಮಗಳ ಹೆಸರಲ್ಲಿ ಎತ್ತಿ ಕಟ್ಟಿ, ವಿಭಜಿಸಿ, ತಮ್ಮ ಬೇಳೆ ಬೇಯಿಸಿಕೊಳ್ಳಲೆಳಸುವ ಇಂತಹಾ ಪ್ರತಿಗಾಮೀ ಫ್ಯಾಸಿಸ್ಟ್ ಶಕ್ತಿಗಳ ನಿಜಬಣ್ಣವನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕಾದುದು ಇಂದಿನ ತುರ್ತು ಅಗತ್ಯವಾಗಿದೆ.

ನಾವೆಲ್ಲರೂ ಮನುಜರು, ನಮ್ಮದೆಲ್ಲರದೂ ಒಂದೇ ಜಾತಿ, ಒಂದೇ ಕುಲ, ನಾವೆಲ್ಲರೂ ದುಡಿಯುವ ಜನ ಎನ್ನುವುದಷ್ಟೇ ಸತ್ಯವಾಗಿದೆ. ದುಡಿಯುವ ಜನರ ಸಮಸ್ಯೆಗಳೂ ಒಂದೇ ಆಗಿರುತ್ತವೆ ಮತ್ತು ಅವುಗಳಿಗೆ ದೇವರು-ಧರ್ಮಗಳ ಆಧಾರದಲ್ಲಿ ಯಾವುದೇ ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಕೋಟಿಗಟ್ಟಲೆಯಲ್ಲಿರುವ ನಮ್ಮನ್ನು, ದುಡಿಯುವ ಜನರನ್ನು, ಬೆರಳೆಣಿಕೆಯಷ್ಟಿರುವ ಧರ್ಮಾಂಧರು ಶೋಷಿಸುವುದಕ್ಕೆ, ದಾರಿ ತಪ್ಪಿಸುವುದಕ್ಕೆ ನಾವು ಅವಕಾಶವನ್ನು ನೀಡಬಾರದು. ಮನುಕುಲದ ಪ್ರಗತಿಯ ಎಲ್ಲಾ ಫಲಗಳು ಜಾತಿ-ಮತಗಳ ಬೇಧವಿಲ್ಲದೆ ಸರ್ವರಿಗೂ ಸಿಗುವಂತಾಗುವುದಕ್ಕೆ ನಾವು ಶ್ರಮಿಸಬೇಕು. ಊಟ, ವಸತಿ, ಆರೋಗ್ಯ, ಶಿಕ್ಷಣ ಇವೇ ಮುಂತಾದ ನಮ್ಮ ದಿನನಿತ್ಯದ ಅಗತ್ಯಗಳನ್ನು ಪೂರೈಸುವಲ್ಲಿ ಯಾವ ನೆರವನ್ನೂ ನೀಡಲಾಗದ ಮತ-ಧರ್ಮಗಳನ್ನು ಸಾರ್ವಜನಿಕ ಜೀವನದಿಂದ ಪ್ರತ್ಯೇಕಿಸಿ, ದುಡಿಯುವ ಜನರೆಲ್ಲರೂ ಒಂದಾಗಿ ತಮ್ಮ ಹಕ್ಕು ಹಾಗೂ ಸ್ವಾತಂತ್ರ್ಯಗಳ ರಕ್ಷಣೆಗಾಗಿ ಹೋರಾಡಬೇಕಾಗಿದೆ.

ಬನ್ನಿ, ಈ ಮಹತ್ಕಾರ್ಯದಲ್ಲಿ ಕೈಜೋಡಿಸೋಣ! ಮನುಕುಲವನ್ನು ಒಡೆದು ನೆತ್ತರ ಕೋಡಿಯನ್ನು ಹರಿಸುತ್ತಿರುವ ಬೆರಳೆಣಿಕೆಯ ಮತಾಂಧ ಶಕ್ತಿಗಳನ್ನು ಧಿಕ್ಕರಿಸೋಣ, ಬಹಿಷ್ಕರಿಸೋಣ!!

ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಯಾರೇ ಇರಲಿ – ಕುಡಿಯುವ ನೀರು, ತಿನ್ನುವ ಆಹಾರ, ವಾಸಿಸುವ ಮನೆ,  ಸಾಗುವ ದಾರಿ ಒಂದೇ ಅಲ್ಲವೆ? ಮತ-ಧರ್ಮಗಳೆಲ್ಲ ಮನೆಯಲ್ಲಿರಲಿ, ಪ್ರೀತಿ-ಭ್ರಾತೃತ್ವ ಹೊರಹೊಮ್ಮಲಿ!!

ದಕ ಜಿಲ್ಲೆಯ ತಾಲಿಬಾನಿಗಳು

September 24, 2008

ನರೇಂದ್ರ ನಾಯಕರ ಲೇಖನ ನೋಡಿ

ದಕ್ಷಿಣ ಕನ್ನಡದಲ್ಲಿ ‘ನೀತಿ ಬೋಧಕರ’ ಕಾರುಬಾರು

September 24, 2008

ವಿವಿಧ ಸಮುದಾಯಗಳಿಗೆ ಸೇರಿದ ಯುವಕ ಯುವತಿಯರು ಬೆರೆತು ತಮ್ಮ ಸಂತೋಷವನ್ನು ಹಂಚಿಕೊಳ್ಳದಂತೆ ತಡೆಯುವ ಕೋಮುವಾದೀ ವಿಪರೀತಗಳೀಗ ದಕ್ಷಿಣ ಕನ್ನಡದಲ್ಲಿ ಸಾಮಾನ್ಯವಾಗಿ ಬಿಟ್ಟಿವೆ. ಅನ್ಯ ಪಂಗಡದ ಯುವಜನರೊಂದಿಗೆ ಬೆರೆಯುವ ಅನೈತಿಕ ಕಾರ್ಯಗಳನ್ನು ತಾವು ತಡೆಯುವುದಾಗಿ ಬಹಿರಂಗವಾಗಿಯೇ ಹೇಳಿಕೊಳ್ಳುವ ಬಜರಂಗ ದಳದ ಕಿಡಿಗೇಡಿಗಳಿಗೆ ಪೋಲೀಸರ ಬೆಂಬಲವೂ ಇದ್ದಂತಿದೆ. ಈ ವರದಿಗಳನ್ನು ನೋಡಿ:

 

ನೈತಿಕತೆಯ ರಕ್ಷಕರು: ಲೇಖನ ನೋಡಿ

ಬಾಂಬು ದಾಳಿಯೂ, ಕೋಮು ದೊಂಬಿಯೂ ಒಂದೇ ಎಂದು ಒಪ್ಪಿಕೊಂಡ ಯೆಡಿಯೂರಪ್ಪ!

September 23, 2008


ದಿಲ್ಲಿ ಬಾಂಬ್ ಸ್ಫೋಟ | ಚರ್ಚ್ ದಾಳಿ | ಬಾಬರಿ ಮಸೀದಿ ದಾಳಿ

ಧರ್ಮದ ಹೆಸರಿನಲ್ಲಿ ವಿವಿಧ ಗುಂಪುಗಳಿಂದ, ವಿವಿಧ ರೂಪಗಳಲ್ಲಿ ಭಯೋತ್ಪಾದನೆಯ ಪ್ರಕರಣಗಳು ಎಲ್ಲೆಡೆಯಲ್ಲೂ ಹೆಚ್ಚುತ್ತಿವೆಯಲ್ಲದೆ, ಯಾವುದೇ ತಪ್ಪುಗಳನ್ನೆಸಗದ ಅಮಾಯಕ ಜನರೇ ಅವುಗಳ ಬಲಿಪಶುಗಳಾಗಿರುತ್ತಾರೆ. ಖ್ಯಾತ ನಿರ್ದೇಶಕರಾದ ಮಹೇಶ್ ಭಟ್ ಹೇಳಿದಂತೆ, ಧರ್ಮದ ಹೆಸರಿನ ಬಾಂಬಿಗೂ ದೊಂಬಿಗೂ ಯಾವುದೇ ವ್ಯತ್ಯಾಸಗಳೂ ಇಲ್ಲ. ಇತ್ತೀಚೆಗೆ ದಿಲ್ಲಿಯಲ್ಲಿ ಸ್ಫೋಟಿಸಿದ ಬಾಂಬುಗಳಾಗಿರಲಿ, ಬಾಬ್ರಿ ಮಸೀದಿಯ ನಾಶವಿರಲಿ ಅಥವಾ ಚರ್ಚುಗಳ ಮೇಲಿನ ದಾಳಿಯಿರಲಿ – ಇವೆಲ್ಲಾ ಒಂದೇ ಕಾಹಿಲೆಯ ವಿವಿಧ ಲಕ್ಷಣಗಳಷ್ಟೇ. ವಿಶೇಷವೆಂದರೆ ಕರ್ನಾಟಕದ ಮುಖ್ಯಮಂತ್ರಿಗಳೂ ಇದನ್ನು ಒಪ್ಪಿಕೊಂಡಂತಿದೆ!

ಆದರೆ ಈ ಜ್ಞಾನೋದಯವೇನೂ ಘಟನೆಗಳು ನಡೆದೊಡನೆ ಆದದ್ದಲ್ಲ. ಒಂದು ವಾರ ಗಲಭೆಕೋರರ ಪರ ವಕಾಲತ್ತು ವಹಿಸಿದ ಬಳಿಕ ಪರೋಕ್ಷವಾಗಿಯಷ್ಟೇ ಈ ತಿಳುವಳಿಕೆಯು ವ್ಯಕ್ತಗೊಂಡಿತು.

ದಿಲ್ಲಿಯಲ್ಲಿ ಸರಣಿ ಬಾಂಬ್ ದಾಳಿಗಳಾದ ಮರುದಿನವೇ ದಕ್ಷಿಣ ಕನ್ನಡದ ವಿವಿಧ ಭಾಗಗಳಲ್ಲಿ ಚರ್ಚುಗಳ ಮೇಲೆ ಸುಯೋಜಿತವಾದ ಸರಣಿ ದಾಳಿಗಳು ನಡೆದವು. ಬಲಾತ್ಕಾರದಿಂದ ಮತಾಂತರ ಮಾಡುವುದನ್ನು ವಿರೋಧಿಸಿ ತಾವು ಈ ದಾಳಿಗಳನ್ನು ನಡೆಸಿದೆವೆಂದು ಆಳುವ ಪಕ್ಷದ ಅಂಗಗಳಾದ ಬಜರಂಗ ದಳ ಹಾಗೂ ವಿ.ಹಿಂ.ಪ. ಗಳು ಘೋಷಿಸಿದವು. ಆದರೆ ಸಂಪರ್ಕದ ಕೊರತೆಯಿಂದಲೋ ಏನೋ, ಮತಾಂತರಕ್ಕೆ ಪ್ರತೀಕಾರವಾಗಿ ಈ ದಾಳಿಗಳನ್ನು ನಡೆಸಲಾಯಿತೆಂದೂ, ಸರಕಾರವನ್ನು ಅಸ್ಥಿರಗೊಳಿಸಲು ವಿರೋಧ ಪಕ್ಷಗಳು ನಡೆಸಿರುವ ಪಿತೂರಿ ಇದೆಂದೂ ಮುಖ್ಯಮಂತ್ರಿಗಳು ವಿರೋಧಾಭಾಸದ ಹೇಳಿಕೆ ಹೊರಡಿಸಿದರು. ಯಾವುದೇ ರಾಗ ದ್ವೇಷಗಳಿಲ್ಲದೆ ಜನರ ಪ್ರಾಣಗಳನ್ನೂ, ಆಸ್ತಿಗಳನ್ನೂ ರಕ್ಷಿಸುವ ಪಣತೊಟ್ಟು ಅಧಿಕ್ಕಾರಕ್ಕೇರಿದ ಗೃಹ ಮಂತ್ರಿಗಳು ದಾಳಿಕೋರರನ್ನು ಬಂಧಿಸುವ ಗೋಜಿಗೆ ಹೋಗದೆ ಮತಾಂತರವನ್ನು ಖಂಡಿಸುವ ಹೇಳಿಕೆ ಹೊರಡಿಸಿದರು. ಜಿಲ್ಲಾ ಉಸ್ತುವಾರಿ ಸಚಿವರು ಬಜರಂಗ ದಳದವರ ಹೇಳಿಕೆಯು ತಮ್ಮ ಅರಿವಿಗೇ ಬಂದಿಲ್ಲವೆಂದು ಜಾರಿಕೊಂಡರು.

ದಾಳಿ ನಡೆಸಿದ್ದು ತಾನೇ ಎಂದೂ, ಮತಾಂತರವು ಮುಂದುವರಿದರೆ ದಾಳಿಗಳೂ ಮುಂದುವರಿಯಲಿವೆಯೆಂದೂ ಬಜರಂಗ ದಳವು ಒಂದೆಡೆ ಬೀಗುತ್ತಿದ್ದರೆ, ಇನ್ನೊಂದೆಡೆ ಗೃಹ ಮಂತ್ರಿಗಳು ತಮ್ಮ ಪರಿವಾರದಿಂದ ತುಂಡಾಗಿ ಹೋದ ಶ್ರೀ ರಾಮ ಸೇನೆಯ ಮೇಲೆ ಗೂಬೆ ಕೂರಿಸಿ ತಮ್ಮ ಮುಯ್ಯಿ ತೀರಿಸಿಕೊಳ್ಳಲು ಯತ್ನಿಸಿದರು, ಬಜರಂಗ ದಳವನ್ನು ರಕ್ಷಿಸುವ ಕೆಲಸವನ್ನು ಮುಂದುವರೆಸಿದರು. ಒಂದಿಲ್ಲೊಂದು ಹಿಂದೂ ಕೋಮುವಾದಿಗಳೇ ದಾಳಿ ನಡೆಸಿದ್ದೆಂದು ಹೇಳಿಕೊಂಡ ಗೃಹಮಂತ್ರಿಗಳು ಈ ದಾಳಿಗಳ ಹಿಂದೆ ವಿರೋಧ ಪಕ್ಷದವರ ಕೈವಾಡವಿದೆಯೆಂದೂ ಹೇಳಲು ಮರೆಯಲಿಲ್ಲ! ಒಂದು ತಪ್ಪಾನ್ನು ಅಡಗಿಸಲು, ಒಂದು ಸುಳ್ಳನ್ನು ಮರಮಾಚಲು ಸಾವಿರ ಸುಳ್ಲುಗಳನ್ನು ಹೇಳಬೇಕಾಗುತ್ತದೆಯೆನ್ನುವುದಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಬೇರೆ ಬೇಕೆ? ಆದರೆ ದಾಳಿಗಳು ಮುಂದುವರಿದಾಗ ಕೇಂದ್ರ ಸರಕಾರವು ಸಂವಿಧಾನದ 355ನೇ ವಿಧಿಯನುಸಾರ ರಾಜ್ಯ ಸರಕಾರಕ್ಕೆ ಎಚ್ಚರಿಕೆ ನೀಡಿದೊಡನೆ ಬಜರಂಗ ದಳದ ಮುಖ್ಯಸ್ಥನನ್ನು ಬಂಧಿಸಲೇ ಬೇಕಾಯಿತು. ಆತ ಅಪರಾಧಿಯಲ್ಲದಿದ್ದರೆ ಬಂಧಿಸುವ ಪ್ರಮೇಯವೇನಿತ್ತು? (ಆದರೆ, ಎರಡೇ ದಿನಗಳಲ್ಲಿ ಆತನಿಗೆ ಜಾಮೀನು ದೊರೆತಿದ್ದನ್ನು ನೋಡಿದರೆ, ಸರಕಾರದ ಬದ್ಧತೆಯು ಎಷ್ಟೆನ್ನುವುದು ಗೊತ್ತಾಗುತ್ತದೆ.) ಎಲ್ಲಾ ವಲಯಗಳಿಂದಲೂ ಒತ್ತಡ ಹೆಚ್ಚಿದಾಗ ನ್ಯಾಯಾಂಗ ತನಿಖೆಗೂ ಸರಕಾರವು ಕ್ರಮ ಕೈಗೊಳ್ಳಬೇಕಾಯಿತು.

ಇಷ್ಟೆಲ್ಲಾ ಫಜೀತಿಯಾದಾಗಲೂ ಮುಖವುಳಿಸಿಕೊಳ್ಳಬೇಡವೇ? ಈ ಎಲ್ಲ ಬೆಳವಣಿಗೆಗಳಿಂದ ಸಂಕಷ್ಟಕ್ಕೆ ಸಿಲುಕಿ ಆಘಾತಗೊಂಡ ಮುಖ್ಯಮಂತ್ರಿಗಳು ಕೇಂದ್ರ ಸರಕಾರವು ಇಬ್ಬಗೆ ನೀತಿಯನ್ನು ಅನುಸರಿಸುತ್ತಿದೆಯೆಂದು ದೂರಿ, ‘ಗಲಭೆ ಪೀಡಿತವಾದ’ ದಿಲ್ಲಿಯ ಸರಕಾರದ ಮೇಲೂ ಇಂತಹದೇ ಕ್ರಮವನ್ನೇಕೆ ಕೈಗೊಳ್ಳಲಿಲ್ಲವೆಂದು ಪ್ರಶ್ನಿಸಿದರು. ತಮ್ಮ ವೈಫಲ್ಯವನ್ನು ಮುಚ್ಚುವುದಕ್ಕೆ ಕೇಂದ್ರ ಸರಕಾರವನ್ನು ತೆಗಳುವ ತರಾತುರಿಯಲ್ಲಿ ದಿಲ್ಲಿಯ ಬಾಂಬು ಸ್ಫೋಟಗಳನ್ನೂ, ಮಂಗಳೂರಿನಲ್ಲಿ ನಡೆದ ಚರ್ಚುಗಳ ಮೇಲಿನ ದಾಳಿಯನ್ನೂ ಮುಖ್ಯಮಂತ್ರಿಗಳೇ ಸಮೀಕರಿಸಿಬಿಟ್ಟರು! ಆದರೆ ಅದೇ ಉಸಿರಿನಲ್ಲಿ ದಿಲ್ಲಿ ಸ್ಫೋಟಗಳನ್ನು ಖಂಡಿಸಿ, ಚರ್ಚುಗಳ ಮೇಲಿನ ದಾಳಿಯನ್ನು ಪರೋಕ್ಷವಾಗಿ ಬೆಂಬಲಿಸಿದರು! ಬಹುಸಂಖ್ಯಾಕರ ಹೆಸರನ್ನು ಉಪಯೋಗಿಸಿಕೊಳ್ಳುವ ಸಮಾಜ ವಿರೋಧಿ ಶಕ್ತಿಗಳಿಗೆ ದಾಂಧಲೆ ಮಾಡುವುದಕ್ಕೆ ಸಂಪೂರ್ಣ ಸ್ವಾತಂತ್ರ್ಯವಿರುವುದಷ್ಟೇ ಅಲ್ಲ, ಸರಕಾರದ ಬೆಂಬಲವೂ ಅವರಿಗಿದೆ!

ಇನ್ನು ಮಾನ್ಯ ಗೃಹ ಮಂತ್ರಿಗಳ ‘ಹೋರಾಟದ ಕೆಚ್ಚನ್ನು’ ನೋಡಬೇಕಾದರೆ ಅವರದ್ದೇ ಆದ ಬ್ಲಾಗನ್ನು ನೋಡಬೇಕು! ಅವರ ‘ನಿಷ್ಪಕ್ಷಪಾತತನದ’ ರುಚಿಯೂ ಅಲ್ಲಿದೆ.

  • ಮತಾಂತರ, ಚರ್ಚುಗಳಲ್ಲಿ ಕ್ರಿಶ್ಚಿಯನರು ನಡೆಸಿದರೆನ್ನಲಾದ ದೊಂಬಿ, ಕಲ್ಲೆಸತ ಹಾಗೂ ಪೋಲೀಸರ ಮೇಲಿನ ದಾಳಿಗಳ ಬಗ್ಗೆ ವಿಸ್ತಾರವಾಗಿ ಬರೆದು, ಅದಕ್ಕೆ ಪೂರಕವಾಗಿ ಹಲವಾರು ಛಾಯಚಿತ್ರಗಳನ್ನೂ ಒದಗಿಸಿರುವ ಮಹನೀಯರು, ಪ್ರಾರ್ಥನಾಮಂದಿರಗಳ ಮೇಲಾಗಿರುವ ದಾಳಿಗಳ ಬಗ್ಗೆ ಒಂದೇ ಒಂದು ಶಬ್ದವನ್ನೂ ಬರೆದಿಲ್ಲ!
  • ತಾನು ಘಟನಾ ಸ್ಥಳಗಳಿಗೆ ಭೇಟಿ ನೀಡಿದ ಬಳಿಕ ತುರ್ತು ಕ್ರಮಗಳನ್ನು ಕೈಗೊಳ್ಳಲಾಯಿತು ಎಂದು ಗೃಹ ಮಂತ್ರಿಗಳ ಅಂಬೋಣ. ವ್ಹಾ! ಎಲ್ಲಿಯೇ ಗಲಭೆ, ದೊಂಬಿಗಳಾಗಲಿ, ನೀವಲ್ಲಿಗೆ ತಲುಪಿದ ಮೇಲಷ್ಟೇ ಅದರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವುದಾಗಿದ್ದರೆ ರಾಜ್ಯದ ಜನತೆಯ ಆಸ್ತಿಪಾಸ್ತಿಗಳ ರಕ್ಷಣೆಯಾದಂತೆಯೇ! ಉಡುಪಿಗೆ ಸದ್ಯದಲ್ಲಿಯೇ ಒಂದು ವಿಮಾನ ನಿಲ್ದಾಣವೂ ಬರಬಹುದೇನೋ!!
  • ಖರ್ಗೆ ಗೃಹ ಮಂತ್ರಿಯಾಗಿದ್ದಾಗ ಮಂಗಳೂರಿನಲ್ಲಿ ನಡೆದ ಕೋಮು ಗಲಭೆ ನಿಯಂತ್ರಣಕ್ಕೆ ಬರಲು 16 ದಿನಗಳೇ ಬೇಕಾದವು, ತಾನು ಈ ಬಾರಿ ಎರಡೇ ದಿನಗಳಲ್ಲಿ ಅದನ್ನು ನಿಯಂತ್ರಿಸಿದ್ದೇನೆ ಎಂದವರು ಹೇಳಿಕೊಂಡಿದ್ದಾರೆ. ಒಕ್ಟೋಬರ್ 2006ರಲ್ಲಿ ದನಗಳ ಸಾಗಾಟದ ಹೆಸರಲ್ಲಿ ಹಿಂದುತ್ವ ಪಡೆಯೇ ಆರಂಭಿಸಿದ ಕೋಮುಗಲಭೆಯಿಂದ ಒಂದು ವಾರ ಮಂಗಳೂರಿನಲ್ಲಿ ಕರ್ಫ್ಯು ಹೇರಿದ್ದಾಗ ಭಾಜಪ-ಜನತಾ ದಳ ಸರಕಾರವೇ ಅಧಿಕಾರದಲ್ಲಿತ್ತೆನ್ನುವುದು ಮಾನ್ಯ ಗೃಹ ಮಂತ್ರಿಗಳಿಗೆ ಮರೆತೇ ಹೋದಂತಿದೆ. ಅಲ್ಲದೆ, ತಾನು ವಿರೋಧ ಪಕ್ಷದಲ್ಲಿದ್ದಾಗ ತನ್ನ ಅಂಗ ಸಂಸ್ಥೆಗಳು ಭಾಗಿಯಾಗುವ ಗಲಭೆಗಳು 16 ದಿನ, ತಾನೇ ಆಳುವಾಗ ಎರಡೇ ದಿನ ಎಂದು ಅವರು ಹೇಳಿಕೊಂಡರೆ, ಅದರ ಗೂಢಾರ್ಥವೂ, ಗಲಭೆಗಳ ಹಿಂದಿನ ಕಾಣದ ಕೈಗಳೂ ವ್ಯಕ್ತವಾಗುವುದಿಲ್ಲವೆ?
  • ತಾನು ಈ ಪರೀಕ್ಷೆಯಲ್ಲಿ ಮೊದಲ ಶ್ರೇಣಿಯಲ್ಲಿ ಉತ್ತೀರ್ಣನಾಗಿದ್ದೇನೆ ಎಂದವರು ಹೇಳಿಕೊಂಡಿದ್ದಾರೆ. ಪರೀಕ್ಷೆಯ ಫಲಿತಾಂಶವನ್ನು ಪರೀಕ್ಷಕರು ಹೇಳುವುದೇ ಹೊರತು ವಿದ್ಯಾರ್ಥಿಯಲ್ಲ ಎನ್ನುವ ಸರಳ ಸತ್ಯವೂ ಮಾನ್ಯ ಗೃಹ ಮಂತ್ರಿಗಳಿಗೆ ತಿಳಿಯದೆಂದರೆ ಹೇಗೆ? ಭಾಜಪದ ಲೋಕಸಭಾ ಸದಸ್ಯರಾದ ಸಾಂಗ್ಲಿಯಾನರೇ ಗೃಹ ಸಚಿವರ ವಿರುದ್ಧ ತೀವ್ರವಾದ ಟೀಕೆಯನ್ನು ಮಾಡಿದ್ದಾರಲ್ಲಾ? ಆದರೆ ಅದಕ್ಕಾಗಿ ಅವರ ಮೇಲೆಯೇ ಕ್ರಮ ಕೈಗೊಳ್ಳಬೇಕಂತೆ! ಟೀಕೆಗಳನ್ನು ಸಹಿಸದಿರುವುದು ಫ್ಯಾಸಿಸಂನ ಲಕ್ಷಣವಲ್ಲವೆ?
  • ಬಜರಂಗ ದಳದ ವಿರುದ್ಧ ದೂರು ನೀಡುವವರಿಗೆ ಕಾನೂನಿನ ಜ್ಞಾನವಿರಬೇಕಂತೆ. ಆದರೆ, ಹಿಂದುತ್ವವಾದಿಗಳು ಯಾರ ಬಗೆಗೂ ತಮಗನಿಸಿದ ತೀರ್ಪನ್ನು ಹೊರಡಿಸಬಹುದು! ಹಾಗಾದರೆ ನ್ಯಾಯಾಂಗ ತನಿಖೆಯ ಅಗತ್ಯವಾದರೂ ಏನು?

ಸೆಪ್ಟೆಂಬರ್ 24ರಂದು ಮಾನ್ಯ ಮುಖ್ಯಮಂತ್ರಿಯವರು ಕೊನೆಗೂ ತಮ್ಮ ಸರಕಾರಕ್ಕಾಗಿರುವ ನಾಚಿಕೆಯನ್ನು ಒಪ್ಪಿಕೊಳ್ಳಲೇ ಬೇಕಾಯಿತು: Government must ‘hang its head in shame’: Yeddyurappa

ಆದರೆ ಇನ್ನೂ ಬೀದಿ ಜಗಳದ ಮನಸ್ಥಿತಿಯ ಬ್ಲಾಗನ್ನು ಬರೆಯುತ್ತಿರುವ ಮಾನ್ಯ ಗೃಹ ಸಚಿವರಿಗೆ ಯಾವಾಗ ಅರಿವು ಮೂಡುತ್ತದೋ ಕಾದು ನೋಡೋಣ!

ಬೆಂಗಳೂರಿನ ಆರ್ಚ್ ಬಿಷಪರು ಮುಖ್ಯಮಂತ್ರಿಗೆ ಹೇಳಿದ್ದೇನು?

ವಿಡಿಯೋ ನೋಡಿ:
Situation grim in Mangalore

Situation grim in Mangalore


Karnataka CM visits violence-hit Mangalore

Karnataka CM visits violence-hit Mangalore


Karnataka churches vandalised

Karnataka churches vandalised

ishare video